ಜಿಲ್ಲೆ

101 ಗ್ರಾಪಂಗಳಲ್ಲಿ ಒಂದು ಲಕ್ಷ ಗಿಡ ನೆಡುವ ಸಂಕಲ್ಪ

Uttara Kannada - Subash Hegde

ಕಾರವಾರ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಜಿಲ್ಲೆಯ 101 ಗ್ರಾಪಂಗಳಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 31 ರಂದು ಏಕ ಕಾಲದಲ್ಲಿ ಸುಮಾರು 10 ಸಾವಿರ ಜನ ತಮ್ಮ ಮನೆಯ ಪರಿಸರದಲ್ಲಿ ಗಿಡ ನೆಡಲಿದ್ದಾರೆ ಎಂದು ತಿಳಿಸಿದರು.

ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಕಳೆದ 31 ವರ್ಷಗಳಿಂದ ನಿರಂತರವಾಗಿ ಜಿಲ್ಲೆಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಅರಣ್ಯ ಅತಿಕ್ರಮಣದಾರರ ಸಾಗುವಳಿ ಹಕ್ಕಿಗಾಗಿ ಹೋರಾಟ ನಡೆಸಿಕೊಂಡು ಬಂದಿದೆ.

ಸಂಘಟನೆಯಲ್ಲಿ 38 ಸಾವಿರ ಸದಸ್ಯರಿದ್ದಾರೆ. ಅರಣ್ಯವಾಸಿಗಳು ಕೇವಲ ಹಕ್ಕು ಕೇಳುವವರಲ್ಲ, ಅರಣ್ಯ ರಕ್ಷಣೆಯ ಜವಾಬ್ದಾರಿಯೂ ನಮಗಿದೆ ಎಂಬ ಸಂದೇಶವನ್ನು ಅರಣ್ಯ ಇಲಾಖೆಗೆ ನೀಡುವ ಸಲುವಾಗಿ ಹಾಗೂ ಅರಣ್ಯವಾಸಿಗಳಿಗೆ ಅರಣ್ಯವನ್ನು ರಕ್ಷಿಸುವ ಜಾಗೃತಿ ಮೂಡಿಸುವ ಸಲುವಾಗಿ ಈ ಅಭಿಯಾನ ಆಯೋಜಿಸಲಾಗುತ್ತಿದೆ ಎಂದರು.

ಇದನ್ನೋ ಓದಿ:ತಹಸೀಲ್ದಾರ್ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರ
ಉತ್ತರ ಕನ್ನಡ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅರಣ್ಯ ಪ್ರದೇಶ ಹೆಚ್ಚಿದ್ದರೂ ವಿವಿಧ ಯೋಜನೆಗಳಿಂದ ಸಾಕಷ್ಟು ಅರಣ್ಯ ನಾಶವಾಗಿದೆ. ಇದರಿಂದ ಅರಣ್ಯೀಕರಣ ಹಮ್ಮಿಕೊಳ್ಳಲಾಗುತ್ತಿದೆ.

ಇದು, ಪ್ರಚಾರಕ್ಕಾಗಿ, ಅನುದಾನ ಖರ್ಚು ಮಾಡುವುದಕ್ಕಾಗಿ ಮಾಡುವ ಕಾರ್ಯಕ್ರಮವಲ್ಲ. ಒಂದೂ ಗಿಡವನ್ನು ಇಲಾಖೆಯಿಂದ ಪಡೆದುಕೊಳ್ಳುವುದಿಲ್ಲ. ನಮ್ಮ ಅತಿಕ್ರಮಣದಾರರು ಸ್ವಂತ ಬೆಳೆಸಿದ ಗಿಡಗಳನ್ನು ನೆಡಲಿದ್ದಾರೆ.

ಪ್ರತಿ ಮನೆಯಲ್ಲಿ ಕನಿಷ್ಠ 3 ಗಿಡ ನೆಡಬೇಕು ಎಂದು ತಿಳಿಸಲಾಗಿದೆ. ಅಂದು ಒಂದೇ ದಿನ 10 ಸಾವಿರ ಜನ ಗಿಡ ನೆಡುವರು. ಮುಂದಿನ 3 ವಾರಗಳಲ್ಲಿ ಜಿಲ್ಲೆಯಲ್ಲಿ 1 ಲಕ್ಷ ಗಿಡ ನೆಡಲಾಗುವುದು.

ಸದಸ್ಯ 101 ಗ್ರಾಪಂನಲ್ಲಿ ಯೋಜನೆ ರೂಪಿಸಲಾಗಿದ್ದರೂ. ಒಟ್ಟು 165 ಗ್ರಾಪಂ ವ್ಯಾಪ್ತಿಯನ್ನು ಮುಟ್ಟುವ ಗುರಿಯನ್ನು ಹೊಂದಲಾಗಿದೆ ಎಂದರು.
ಸಂಘಟನೆಯ ಪ್ರಧಾನ ಸಂಚಾಲಕ ಜಿ.ಎಂ.ಶೆಟ್ಟಿ, ಪದಾಽಕಾರಿಗಳಾದ ಭೀಮ್ಶಿ ವಾಲ್ಮೀಕಿ, ರಮಾನಂದ ನಾಯ್ಕ ಅಚವೆ, ಬಾಲಚಂದ್ರ ಶೆಟ್ಟಿ, ಪಾಂಡುರಂಗ ನಾಯ್ಕ ಭಟ್ಕಳ, ಸಾರಾ ಲತೀಫ್ ಬೆಟ್ಕುಳಿ, ಯಾಖೂಬ್ ಸಗೀರ್ ಮೊಹಮದ್ ಸತ್ತೂರ್, ರಿಜ್ವಾನ್ ಭಟ್ಕಳ ಸುದ್ದಿಗೋಷ್ಠಿಯಲ್ಲಿದ್ದರು.

ಎಂಪಿ ಟಿಕೆಟ್ ಆಕಾಂಕ್ಷಿ

ಮುಂದಿನ ಲೋಕಸಭಾ ಚುನಾವಣೆಯ ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಪಕ್ಷಕ್ಕಾಗಿ ದುಡಿದಿದ್ದೇನೆ. ನನಗೆ ಇಚ್ಛೆ ಇದೆ. ನಾನು ಸನ್ಯಾಸಿಯಲ್ಲ. ಆದರೆ, ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಎ.ರವೀಂದ್ರನಾಥ ನಾಯ್ಕ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.