More

    ತಹಸೀಲ್ದಾರ್ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರ

    ಕುಮಟಾ: ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಸೂಚನೆಯಂತೆ ಪ್ರಾರಂಭಿಕ ಹಂತದಲ್ಲಿ ಇಲ್ಲಿನ ತಹಸೀಲ್ದಾರ್ ಕಚೇರಿಯ ವಿವಿಧ ವಿಭಾಗಗಳನ್ನು ಮೂರೂರು ರಸ್ತೆಯಲ್ಲಿರುವ ತಾಲೂಕು ಆಡಳಿತ ಸೌಧದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ. ಜು. 24ರಂದು ಕಚೇರಿ ಕೆಲಸ ಕಾರ್ಯಗಳು ಅಲ್ಲಿಯೇ ಆರಂಭಗೊಳ್ಳಲಿವೆ ಎಂದು ತಹಸೀಲ್ದಾರ್ ಎಸ್.ಎಸ್. ನಾಯ್ಕಲಮಠ ತಿಳಿಸಿದರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಆಡಳಿತ ಸೌಧ 2023ರ ಮಾ. 17ರಂದು ಉದ್ಘಾಟನೆಗೊಂಡಿತ್ತು. ಬಳಿಕ ಹೊಸ ಕಟ್ಟಡವನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಾಗಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸೌಧಕ್ಕೆ ಹಳೆಯ ಕಟ್ಟಡದಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸುವುದು ವಿಳಂಬವಾಗಿದೆ ಎಂದರು.

    ಈಗ ನೂತನ ಕಟ್ಟಡಕ್ಕೆ ಶುಕ್ರವಾರ ಸಾಂಕೇತಿಕವಾಗಿ ಪೂಜೆ ಮಾಡಲಾಗಿದ್ದು, ಮೊದಲಿಗೆ ತಹಸೀಲ್ದಾರ್ ಕಚೇರಿಯ ಚುನಾವಣೆ ವಿಭಾಗ, ಆಡಳಿತ, ಸಿಬ್ಬಂದಿ, ಭೂ ಸುಧಾರಣೆ, ಎಲ್‌ಎನ್‌ಡಿ, ಅಂಕಿಸಂಖ್ಯೆ, ತಹಸೀಲ್ದಾರ್ ಗ್ರೇಡ್-2 ವಿಭಾಗಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದರು.

    ಭೂಮಿ, ಅಭಿಲೇಖಾಲಯ, ಅಟಲ್ ಜೀ ಜನಸ್ನೇಹಿ ಕೇಂದ್ರ, ಆಧಾರ್, ಆಹಾರ ವಿಭಾಗಗಳು ಕೇಸ್ವಾನ್ ಅಂತರ್ಜಾಲ ಸಂಪರ್ಕ ಹೊಂದಿವೆ. ಹೀಗಾಗಿ, ಕೇಸ್ವಾನ್ ಸಂಪರ್ಕ ಸ್ಥಳಾಂತರಕ್ಕೆ ಟೆಂಡರ್ ಕರೆದು ಏಜೆನ್ಸಿ ನಿಗದಿ ಮಾಡಿದ ಬಳಿಕ ಸ್ಥಳಾಂತರಿಸಲಾಗುವುದು. ಅಲ್ಲಿಯವರೆಗೂ ಈಗಿರುವ ತಹಸೀಲ್ದಾರ್ ಕಚೇರಿಯ ಹಳೆಯ ಕಟ್ಟಡದಲ್ಲೇ ಅವುಗಳು ಕಾರ್ಯನಿರ್ವಹಿಸುತ್ತವೆ. ಹಾಗೆಯೇ ನೂತನ ಕಟ್ಟಡದಲ್ಲಿ ಆ. 1ರಂದು ಇ-ಕಚೇರಿ ಕೂಡ ಕಾರ್ಯಾರಂಭಿಸುವ ಗುರಿ ಹೊಂದಲಾಗಿದೆ ಎಂದರು.

    ನೂತನ ತಾಲೂಕು ಆಡಳಿತ ಸೌಧದ ನೆಲಮಹಡಿಯಲ್ಲಿ ಕಂದಾಯ ಇಲಾಖೆಯ ಅಭಿಲೇಖಾಲಯ, ಚುನಾವಣೆ ಸ್ಟ್ರಾಂಗ್ ರೂಮ್ ಇರಲಿದೆ. ಮೊದಲನೇ ಮಹಡಿಯಲ್ಲಿ ತಹಸೀಲ್ದಾರ್ ಹಾಗೂ ಗ್ರೇಡ್- 2 ತಹಸೀಲ್ದಾರ್, ಉಳಿದ ವಿಭಾಗಗಳು, ಉಪಖಜಾನೆ ಇರಲಿದೆ. ಎರಡನೇ ಮಹಡಿಯಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಉಪನೋಂದಣಾಧಿಕಾರಿ ಕಚೇರಿ, ಕಾರ್ಮಿಕ ಇಲಾಖೆ, ಮೂರನೇ ಮಹಡಿಯಲ್ಲಿ ಉಪವಿಭಾಗಾಧಿಕಾರಿ ಕಚೇರಿ ಹಾಗೂ ಅಬಕಾರಿ ಇಲಾಖೆ ಕಚೇರಿ ಇರಲಿದೆ ಎಂದು ಎಸ್.ಎಸ್. ನಾಯ್ಕಲಮಠ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts