ಜಿಲ್ಲೆ

ಬೆಂಗಳೂರಿನ ಹುಡುಗಿಯನ್ನು ಮದ್ವೆಯಾಗಿದ್ದ ನೈಜೀರಿಯಾ ಪ್ರಜೆ, ಬರೀ ಬಿಯರ್-ಸಿಗರೇಟ್​ ವಿಷಯಕ್ಕೇ ಕೊಲೆಯಾಗಿ ಹೋದ!

ಬೆಂಗಳೂರು: ಈತ ನೈಜೀರಿಯಾದವನಾದರೂ ಬೆಂಗಳೂರಿನ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ದುರದೃಷ್ಟವಶಾತ್ ನಿನ್ನೆ ರಾತ್ರಿ ಬರೀ ಬಿಯರ್​-ಸಿಗರೇಟ್ ವಿಚಾರಕ್ಕೇ ಕೊಲೆಯಾಗಿ ಹೋಗಿದ್ದಾನೆ.

ನೈಜೀರಿಯಾ ಮೂಲದ ವಿಕ್ಟರ್ ಕೊಲೆಗೀಡಾದವ. ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಈತ ಇಲ್ಲಿನ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ನಿನ್ನೆ ರಾತ್ರಿ ಬಾಣಸವಾಡಿಯ ಕಮ್ಮನಹಳ್ಳಿ ರಸ್ತೆಯಲ್ಲಿ ವಿಕ್ಟರ್​ ಹತ್ಯೆಗೀಡಾಗಿದ್ದ.

ಹರಿತವಾದ ಆಯುಧದಿಂದ ವಿಕ್ಟರ್​ಗೆ ಇರಿದು ಕೊಲೆ ಮಾಡಲಾಗಿತ್ತು. ಆತ​ ಅಲ್ಲೇ ಕುಸಿದು ಮೃತಪಟ್ಟಿದ್ದು, ಶವ ರಕ್ತಸಿಕ್ತವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಣಸವಾಡಿ ಪೊಲೀಸರು ಇಂದು ಮೂವರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ಹಾಗೂ ಬಂಧಿತರ ಕುರಿತು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ. ಶರಣಪ್ಪ ಮಾಹಿತಿ ನೀಡಿದ್ದಾರೆ.

ಪ್ರಕರಣ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದವರು ನಿನ್ನೆ ರಾತ್ರಿಯೇ ಕಾರ್ಯಾಚರಣೆಗೆ ಇಳಿದಿದ್ದು, ಮೂವರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಅರುಣ್​, ನೀಲಕಂಠ ಮತ್ತು ಪಿಲಿಫ್​ ರಾಜ್ ಬಂಧಿತರು.

ವಿಕ್ಟರ್ ನಡೆದುಕೊಂಡು ಹೋಗುತ್ತಿದ್ದಾಗ ಎದುರಾದ ಆರೋಪಿಗಳು ಬಿಯರ್ ಹಾಗೂ ಸಿಗರೇಟ್ ಕೇಳಿದ್ದಾರೆ. ಆತ ಕೊಡಲು ನಿರಾಕರಿಸಿದಾಗ ಜಗಳವಾಗಿದೆ. ಆ ಸಂದರ್ಭದಲ್ಲಿ ವಿಕ್ಟರ್ ಬಿಯರ್ ಬಾಟಲಿಯಿಂದ ಹೊಡೆದಿದ್ದಾನೆ. ಅದೇ ಬಿಯರ್ ಬಾಟಲಿ ಚೂರು ಹಾಗೂ ಹರಿತವಾದ ಆಯುಧಗಳಿಂದ ಆರೋಪಿಗಳು ವಿಕ್ಟರ್​ಗೆ ಚುಚ್ಚಿ ಸಾಯಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಆರೋಪಿಗಳು ನೀಡುತ್ತಿರುವ ಹೇಳಿಕೆಗಳು ಅನುಮಾನಾಸ್ಪದವಾಗಿವೆ. ಹೀಗಾಗಿ ಸದ್ಯ ತನಿಖೆ ಮುಂದುವರಿಸಲಾಗಿದ್ದು, ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಶರಣಪ್ಪ ತಿಳಿಸಿದ್ದಾರೆ.