ರಾಯಚೂರಿನ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದಲ್ಲಿ ವಸತಿ ನಿಲಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾಲಯದ ಮುಖ್ಯಸ್ಥೆ ಸ್ಮಿತಾ ಅಕ್ಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬೇಬಿ ಹುಲ್ಸಾವರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಸಂಗನಬಸಪ್ಪ ಬಿರಾದರ, ವೀರಶೈವ ಪ್ರಸಾದ ನಿಲಯದ ಅಧ್ಯಕ್ಷ ಶರಣಬಸಪ್ಪ ಅರಳಿ ಇದ್ದರು. 
ಜಿಲ್ಲೆ

ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ಅಗತ್ಯ

ರಾಯಚೂರು: ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಅವಶ್ಯಕತೆಯಿದೆ ಎಂದು ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಮುಖ್ಯಸ್ಥೆ ಸ್ಮಿತಾ ಅಕ್ಕ ಹೇಳಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಸಭಾಂಗಣದಲ್ಲಿ ವಸತಿ ನಿಲಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಏಕಾಗ್ರತೆ, ಸಕಾರಾತ್ಮಕ ವ್ಯಕ್ತಿತ್ವ ನಿರ್ಮಾಣ ಕುರಿತು ತರಬೇತಿ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರ ಮತ್ತು ಸಂಬಂಧಿಸಿದ ಅಧಿಕಾರಿಗಳ ಪರಿಶ್ರಮ, ಪ್ರಾಮುಖ್ಯತೆ ಬಹು ಮುಖ್ಯವಾಗಿದೆ. ಮಕ್ಕಳನ್ನು ಮನಪರಿವರ್ತನೆ ಮಾಡಿ ಕಲಿಕೆ ಆಸಕ್ತಿ ಮತ್ತು ಏಕಾಗ್ರತೆ ಬೆಳೆಸಬೇಕಾಗಿದೆ. ಹೀಗಿದ್ದಾಗ ಮಾತ್ರ ಮಕ್ಕಳು ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಲು ಸಾಧ್ಯ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬೇಬಿ ಹುಲ್ಸಾವರ್ ಮಾತನಾಡಿ, ಮೊಬೈಲ್‌ನಿಂದಾಗಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ. ಅದನ್ನು ತಡೆಗಟ್ಟುವ ಮೂಲಕ ಅವರಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಸಂಗನಬಸಪ್ಪ ಬಿರಾದರ, ವೀರಶೈವ ಪ್ರಸಾದ ನಿಲಯದ ಅಧ್ಯಕ್ಷ ಶರಣಬಸಪ್ಪ ಅರಳಿ, ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಾದ ವೀರೇಶ, ತಾಯಪ್ಪ, ಲಕ್ಷ್ಮಿ, ರೂಪಾ ಕುಲಕರ್ಣಿ ಉಪಸ್ಥಿತರಿದ್ದರು.