ಜಿಲ್ಲೆ

ಅನಧಿಕೃತ ವ್ಯಾಪಾರಕ್ಕೆ ಫುಟ್‌ಪಾತ್ ಅಡ್ಡ ! : ರಸ್ತೆಗಳಲ್ಲಿ ತಲೆಎತ್ತುತ್ತಿವೆ ಬೀದಿ ವ್ಯಾಪಾರಿಗಳ ಟೆಂಟ್ : ಪಾದಚಾರಿ, ವಾಹನ ಸವಾರರಿಗೆ ತೊಂದರೆ

ಸೌಮ್ಯ ಆರ್

ಪುರುಷೋತ್ತಮ ಪೆರ್ಲ ಕಾಸರಗೋಡು

ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿರುವ ಫುಟ್‌ಪಾತ್‌ಗಳಲ್ಲಿ ಇದೀಗ ಮನುಷ್ಯ ಸಂಚಾರಕ್ಕಿಂತಲೂ ಅನಧಿಕೃತ ಬೀದಿವ್ಯಾಪಾರಿಗಳ ಟೆಂಟ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಪಾದಚಾರಿಗಳು ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಿದ್ದು, ಇದರಿಂದ ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿ ಆಗುತ್ತಿವೆ.

ನಗರಾದ್ಯಂತ ಇರುವ ಫುಟ್‌ಪಾತ್‌ಗಳ ಆಕ್ರಮಿಸಿಕೊಂಡಿರುವ ಬೀದಿ ವ್ಯಾಪಾರಿಗಳು ತಮ್ಮ ಬಳಿಯಿರುವ ಕಸಗಳನ್ನೂ ರಸ್ತೆ ಮೇಲೆ ಸುರಿದು ಹೋಗುತ್ತಿದ್ದು, ನಗರದ ಸ್ವಚ್ಛತೆಗೆ ಧಕ್ಕೆಯಾಗಿದೆ. ದಿನಗಳೆದಂತೆ ಅನಧಿಕೃತ ಬೀದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಲೇ ಇದ್ದು, ಸ್ಥಳೀಯಾಡಳಿತ ಇದನ್ನು ಕೂಡಲೇ ತೆರವುಗೊಳಿಸಬೇಕಿದೆ.

ಕಾಸರಗೋಡು ಬಸ್‌ನಿಲ್ದಾಣ ಹೊರವಲಯಕ್ಕ ಸ್ಥಳಾಂತರಗೊಂಡು ಹೊಸ ಬಸ್ ನಿಲ್ದಾಣವಾಗಿ ತಲೆ ಎತ್ತುತ್ತಿದ್ದಂತೆ ಹಳೇ ಬಸ್ ನಿಲ್ದಾಣವನ್ನು ನಿರ್ಲಕ್ಷಿಸಲಾಗುತ್ತಿದೆ. ಹೊಸ ನಿಲ್ದಾಣಕ್ಕೆ ತೆರಳುವ ಕೆಎಸ್ಸಾರ್ಟಿಸಿ ಬಸ್‌ಗಳು ಹಳೇ ಬಸ್ ನಿಲ್ದಾಣ ಮುಂದೆ ಹಾದುಹೋಗುತ್ತಿದ್ದು, ಆದರೆ ಇಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ತೆಯಿಲ್ಲ. ಮಳೆ ಸುರಿದ ಸಂದರ್ಭ ಪ್ರಯಾಣಿಕರೆಲ್ಲರೂ ಒದ್ದೆಯಾಗಿ ನಿಲ್ಲುವ ಪರಿಸ್ಥಿತಿ ಇದೆ. ಅನಧಿಕೃತ ಬೀದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿ ಫುಟ್‌ಪಾತ್ ಪಾದಚಾರಿಗಳಿಗೆ ಬಿಟ್ಟುಕೊಡುವ ಕುರಿತು ಕ್ರಮಕೈಗೊಳ್ಳಲು ನಗರಸಭೆ ಆಡಳಿತ ಜಾಣಮೌನ ವಹಿಸಿದೆ. ಇತ್ತ ನಗರ ಸ್ವಚ್ಛತೆಯತ್ತವೂ ಆಡಳಿತ ವರ್ಗ ನಿರ್ಲಕ್ಷೃ ವಹಿಸುತ್ತಿದೆ. ನಗರಸಭಾ ಆಡಳಿತದಿಂದ ವ್ಯಾಪಾರಿಗಳು, ಸಾರ್ವಜನಿಕರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ.

ನಗರಸಭೆ ಇಬ್ಬಗೆ ನೀತಿ

ಬೀದಿಬದಿ ವ್ಯಾಪಾರಿಗಳ ವಿಷಯದಲ್ಲಿ ನಗರಸಭೆ ಇಬ್ಬಗೆ ನೀತಿ ಅನುಸರಿಸುತ್ತಿದೆ. ಒಂದೆಡೆ, ಕಾಸರಗೋಡು ನಗರ ಸುಂದರ ನಗರ ಎಂಬ ಘೋಷಣೆಯೊಂದಿಗೆ ಕಾರ್ಯಾಚರಿಸುತ್ತಿರುವ ಕಾಸರಗೋಡು ನಗರ ಸಭೆ ಇನ್ನೊಂದೆಡೆ ಬೀದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಫುಟ್‌ಪಾತ್ ಸಹಿತ ಇಡಿ ನಗರವನ್ನೇ ಮಾರುಕಟ್ಟೆಯಂತಾಗಿಸಿದೆ. ವಾಹನ ನಿಲುಗಡೆಗಂತೂ ಮಾನದಂಡಗಳೇ ಇಲ್ಲದಂತಾಗಿದ್ದು, ನಗರಾದ್ಯಂತ ಸಿಕ್ಕಸಿಕ್ಕಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಟ್ರಾಫಿಕ್ ವ್ಯವಸ್ಥೆ ಕೂಡ ಇಲ್ಲಿ ಸಮರ್ಪಕವಾಗಿಲ್ಲ.

ಹಳೇ ಬಸ್ ನಿಲ್ದಾಣ ವಠಾರದ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಹೊಸ ಬಸ್ ನಿಲ್ದಾಣ ಸಮೀಪ ನಿರ್ಮಿಸಲಾಗಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಪ್ರಯಾಣಿಕರಿಗೆ ಹಾಗೂ ಪಾದಚಾರಿಗಳಿಗೆ ಸಮಸ್ಯೆಯಾಗದ ರೀತಿಯಲ್ಲಿ ಹಳೇ ಬಸ್‌ನಿಲ್ದಾಣದಲ್ಲಿ ವ್ಯವಸ್ಥೆ ಸಜ್ಜುಗೊಳಿಸಲಾಗುವುದು. ಅಬ್ಬಾಸ್ ಬೀಗಂ ನಗರಸಭಾ ಅಧ್ಯಕ್ಷ
  • ಎಂಜಿ ರಸ್ತೆಯಿಂದ ತೊಡಗಿ ಪಳ್ಳಂ ಜಂಕ್ಷನ್‌ವರೆಗೆ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್
  • ಹಳೇ ಬಸ್‌ಸ್ಟಾೃಂಡ್‌ನಲ್ಲಿ ಸೂಕ್ತ ಆಸನಗಳ ಕೊರತೆ
  • ಕಾಸರಗೋಡು ನಗರಾದ್ಯಂತ ಫುಟ್‌ಪಾತ್ ಬೀದಿ ವ್ಯಾಪಾರಿಗಳಿಂದ ಅತಿಕ್ರಮಣ
  • ನಗರ ಸ್ವಚ್ಛತೆ ಕಾಯ್ದುಕೊಳ್ಳುವಿಕೆಯಲ್ಲೂ ಆಡಳಿತ ವರ್ಗ ವಿಫಲ
  • ಜಾಣಮೌನ ವಹಿಸಿರುವ ಕಾಸರಗೋಡು ನಗರಸಭೆ