ಜಿಲ್ಲೆ

ಆಹಾರ ಪದಾರ್ಥ ವಿತರಣೆ ಯಥಾ ಸ್ಥಿತಿ ಇರಲಿ: ಸರ್ಕಾರಿ ಪಡಿತರ ವಿತರಕ ಸಂಘ ಮನವಿ

ಬೆಂಗಳೂರು: ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ’ಹಾಗೂ ರಾಜ್ಯ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಡಿ ಬಿಪಿಎಲ್ ಹೊಂದಿರುವ ಪ್ರತಿ ಸದಸ್ಯರಿಗೆ ನೀಡಲಾಗುತ್ತಿರುವ 10 ಕೆಜಿ ಆಹಾರ ಧಾನ್ಯ ವಿತರಣೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಸರ್ಕಾರಕ್ಕೆ, ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘ ಒತ್ತಾಯಿಸಿದೆ.

ಎರಡು ಯೋಜನೆಯಡಿ ತಲಾ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್‌ನ ಪ್ರತಿ ಲಾನುಭವಿಗೆ ಉಚಿತವಾಗಿ ನೀಡಲಾಗುತ್ತಿದೆ. ಇದೀಗ, ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಕಡಿತಗೊಳಿಸಿ ಆಹಾರ ಕಿಟ್ ಕೊಡಲು ಆಹಾರ ಇಲಾಖೆ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂಬ ಮಾಹಿತಿ ಬಂದಿದೆ. ಯಾವುದೇ ಕಾರಣಕ್ಕೂ ಹೆಚ್ಚುವರಿ ಅಕ್ಕಿ ಕಡಿತ ಮಾಡದೇ ಯಥಾಸ್ಥಿತಿ ಮುಂದುವರಿಸಬೇಕೆಂದು ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಮನವಿ ಮಾಡಿದ್ದಾರೆ.

2013ರಲ್ಲಿ ಬೇಳೆ, ಉಪ್ಪು, ಸಕ್ಕರೆ, ಅಡುಗೆ ಎಣ್ಣೆ ಸೇರಿ ಇತರೆ ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಅಕ್ಕಿ ಜೊತೆಗೆ ಕಾರ್ಡ್‌ದಾರರಿಗೆ ನೀಡಲಾಗುತ್ತಿತ್ತು. ಸ್ವಲ್ಪ ವರ್ಷ ದಿನಬಳಕೆ ವಸ್ತುಗಳನ್ನು ನೀಡಲಾಗುತ್ತಿತ್ತು. ಆದರೆ, ಕಾರಣಾಂತರಗಳಿಂದ ಇದನ್ನು ನಿಲ್ಲಿಸಲಾಗಿತ್ತು. ಹಿಂದಿನ ಮಾದರಿ ಅಡಿ ಸಬ್ಸಿಡಿ ದರದಲ್ಲಿ ಅಗತ್ಯ ವಸ್ತುಗಳು ಹೊಂದಿರುವ ಕಿಟ್ ಖರೀದಿಗೆ ಮಾಲೀಕರಿಗೆ ಅವಕಾಶ ನೀಡಬೇಕು.ಕಿಟ್ ಜೊತೆಗೆ ಅಕ್ಕಿಯನ್ನು ಕಾರ್ಡ್‌ದಾರರಿಗೆ ವಿತರಿಸುತ್ತೇವೆ ಎಂದು ಹೇಳಿದರು.

ಭಾರತೀಯ ಆಹಾರ ನಿಗಮದಿಂದ(ಎಫ್​​ಸಿಐ) ಸಗಟು ಮಳಿಗೆಗಳಿಗೆ ಅಕ್ಕಿ ಎತ್ತುವಳಿಗೆ ವಿಳಂಬದಿಂದ ಆಹಾರ ಪದಾರ್ಥ ವಿತರಣೆಯಲ್ಲಿ ಸಾಕಷ್ಟು ತೊಂದರೆಯಾಗಿದೆ. ರಾಜ್ಯಾದ್ಯಂತ ಈವರೆಗೆ ಶೇ.25 ಕಾರ್ಡ್‌ದಾರರಿಗೆ ಮಾತ್ರ ನೀಡಲಾಗಿದೆ. ಮುಂದಿನ 3-4 ದಿನಗಳಲ್ಲಿ ಎಲ್ಲರಿಗೂ ವಿತರಣೆ ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಸರ್ವರ್ ಸಮಸ್ಯೆ ಕಾಡುತ್ತಿದೆ. ಹೀಗಾಗಿ, ಅಕ್ಕಿ ವಿತರಣೆಗೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಆಹಾರ ಸಚಿವರಿಗೆ ಕೃಷ್ಣಪ್ಪ ಮನವಿ ಮಾಡಿದ್ದಾರೆ.