ಹೂವಿನಹಡಗಲಿಯಲ್ಲಿ ಸಣ್ಣ ಏತನೀರಾವರಿ ಯೋಜನೆಯ ನಿರ್ವಾಹಕ ಮತ್ತು ನೀರಗಂಟಿ ದಿನಗೂಲಿ ನೌಕರರ ಸಂಘ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶನಿವಾರ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಪಾಲ್ಗೊಂಡು ಬೆಂಬಲಿಸಿದರು. ಪ್ರಮುಖರಾದ ಎಚ್.ಎಂ.ಕೊಟ್ರೇಶ್, ಎಚ್.ರುದ್ರಪ್ಪ, ಕೆ.ಷಣ್ಮುಖಪ್ಪ, ಕೆ.ಭೀಮಪ್ಪ, ಟಿ.ಹನುಮಂತ ಇತರರಿದ್ದರು. 
ಜಿಲ್ಲೆ

ಬಾಕಿ ಹಣ ಪೂರ್ಣ ಪಾವತಿಸಿ

ನರೇಶ್ ಕುಮಾರ್

ಹೂವಿನಹಡಗಲಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಣ್ಣ ಏತ ನೀರಾವರಿ ಯೋಜನೆ ಹಾಗೂ ನಿರ್ವಾಹಕರ ಮತ್ತು ನೀರಗಂಟಿ ದಿನಗೂಲಿ ನೌಕರರ ಸಂಘದಿಂದ ಪಟ್ಟಣದ ಸಣ್ಣ ಏತ ನೀರಾವರಿ ಇಲಾಖೆಯ ಎಇಇ ಕಚೇರಿ ಮುಂದೆ ಕೈಗೊಂಡಿರುವ ಅನಿರ್ದಿಷ್ಠಾವಧಿ ಧರಣಿ ಎರಡನೇ ದಿನವಾದ ಶನಿವಾರವೂ ಮುಂದುವರಿಯಿತು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ಹೂವಿನಹಡಗಲಿ ವಿಭಾಗದ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರಗಂಟಿಗಳು ಮತ್ತು ಪಂಪ್ ಆಪರೇಟರ್‌ಗಳಿಗೆ 2019 ರಿಂದ ಹಾಜರಾತಿ, ವೇತನ, ಭವಿಷ್ಯನಿಧಿ, ವಿಮಾ ಸೌಲಭ್ಯ ಸೇರಿದಂತೆ ಇತರ ಸೌಲಭ್ಯಗಳನ್ನು ಗುತ್ತಿಗೆದಾರರು ಮತ್ತು ಇಲಾಖೆಯವರು ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಸಂಬಂಧಪಟ್ಟ ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಬೇಕು ಎಂದರು.

ಸ್ಥಳಕ್ಕೆ ಆಗಮಿಸಿದ ಗುತ್ತಿಗೆದಾರರಾದ ಎಚ್.ಈಶಪ್ಪ ಮತ್ತು ಇಸ್ಮಾಯಿಲ್ ಮಾತನಾಡಿ, ಸರ್ಕಾರದಿಂದ ಹಣ ಬಾರದಿದ್ದರೂ ಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ತೊಂದರೆಯಾಗದಂತೆ ಅರ್ಧದಷ್ಟು ಹಣ ಪಾವತಿಸಲಾಗಿದೆ. ಇನ್ನೊಂದು ತಿಂಗಳು ಕಾಲಾವಕಾಶ ನೀಡಿದರೆ ಸಂಪೂರ್ಣ ಹಣ ನೀಡುತ್ತೇವೆ ಎಂದರು. ಇದಕ್ಕೊಪ್ಪದ ಮಾಜಿ ಶಾಸಕರು, ಬಾಕಿ ಹಣ ನೀಡುವವರೆಗೂ ಪ್ರತಿಭಟನೆ ವಾಪಸ್ ಪಡೆಯಲ್ಲ ಎಂದರು.

ಸಣ್ಣ ಏತ ನೀರಾವರಿ ಇಲಾಖೆ ಎಇ ವೆಂಕಟೇಶ್ ಮಾತನಾಡಿ, ಗುತ್ತಿಗೆದಾರರಿಗೆ ಸಮಸ್ಯೆಗಳನ್ನು ಪರಿಹರಿಸುವಂತೆ ನೋಟಿಸ್ ನೀಡಲಾಗಿದೆ. ಪ್ರಸಕ್ತ ವರ್ಷ 60 ಜನ ನೀರಗಂಟಿ ಹಾಗೂ ಪಂಪ್ ಆಪರೇಟರ್‌ಗಳನ್ನು ಒಂದೇ ಗುತ್ತಿಗೆ ಏಜೆನ್ಸಿ ಅಡಿ ನೇಮಿಸಿಕೊಂಡು ಅವರಿಗೆ ಹುದ್ದೆಗೆ ತಕ್ಕಂತೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸೂಕ್ತ ಸೌಲಭ್ಯ ಕಲ್ಪಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಆದರೂ ಪ್ರತಿಭಟನಾಕಾರರ ಮನವೊಲಿಸಲು ಸಾಧ್ಯವಾಗಲಿಲ್ಲ.

ಸಂಘದ ಅಧ್ಯಕ್ಷ ಎಚ್.ಎಂ.ಕೊಟ್ರೇಶ್, ಉಪಾಧ್ಯಕ್ಷ ಎಚ್.ರುದ್ರಪ್ಪ, ಕಾರ್ಯದರ್ಶಿ ಕೆ.ಷಣ್ಮುಖಪ್ಪ, ಖಜಾಂಚಿ ಕೆ.ಭೀಮಪ್ಪ, ಸಹಕಾರ್ಯದರ್ಶಿ ಟಿ.ಹನುಮಂತ, ಸದಸ್ಯರಾದ ಕಾಸಿಂ, ಉಮೇಶ್ ನಾಯ್ಕ, ಎಚ್.ರಾಮಪ್ಪ, ವೀರಣ್ಣ, ಪಾಂಡುನಾಯ್ಕ ಇತರರಿದ್ದರು.