ಜಿಲ್ಲೆ

ಗೆದ್ದು ಬೀಗಿದ ಬಿಎಸ್​ವೈ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಮೈತ್ರಿ ಸರ್ಕಾರದ ಪತನದ ನಂತರ ಒಂದೊಂದೇ ಸವಾಲನ್ನು ದಾಟಿಬಂದ ಬಿ.ಎಸ್.ಯಡಿಯೂರಪ್ಪ ಇದೀಗ ವಿಧಾನಪರಿಷತ್ ನಾಮನಿರ್ದೇಶನ ವಿಚಾರದಲ್ಲೂ ಯಶ ಸಾಧಿಸಿದ್ದು, ಇನ್ನು ಸಂಪುಟ ಸವಾಲು ಎದುರಿಸಲು ಸನ್ನದ್ಧರಾಗುತ್ತಿದ್ದಾರೆ.

ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಮಾಜಿ ಸಚಿವರಾದ ಎಚ್. ವಿಶ್ವನಾಥ್, ಸಿ.ಪಿ. ಯೋಗೇಶ್ವರ್ ಸೇರಿ ಮಹಿಳಾ ಮೋರ್ಚಾದ ಭಾರತಿ ಶೆಟ್ಟಿ, ಪರಿಸರವಾದಿ ಶಾಂತಾರಾಮ ಸಿದ್ದಿ, ಶಿಕ್ಷಣ ತಜ್ಞ ಡಾ. ತಳವಾರ್ ಸಾಬಣ್ಣ ಅವರ ಹೆಸರಿನ ಪಟ್ಟಿಯನ್ನು ಬುಧವಾರ ಸ್ವತಃ ಯಡಿಯೂರಪ್ಪ ರಾಜ್ಯಪಾಲರಿಗೆ ಸಲ್ಲಿಸಿದ್ದರು. ಸಂಜೆಯ ವೇಳೆಗೆ ಅಧಿಸೂಚನೆ ಹೊರಬಿದ್ದಿದೆ.

ವಿಧಾನಪರಿಷತ್​ನ ಐದು ನಾಮನಿರ್ದೇಶನ ಸ್ಥಾನದ ಪ್ರಸ್ತಾವನೆಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದು, ವರಿಷ್ಠರ ಹೇರಿಕೆ ಇಲ್ಲದ ಆಯ್ಕೆಗಳು ನಡೆದಿರುವುದು ಸ್ಪಷ್ಟ. ಜತೆಗೆ ಬಿಎಸ್​ವೈ ತಮ್ಮ ಅಪೇಕ್ಷೆಯೊಂದಿಗೆ ಪಕ್ಷದ ಆಶಯಕ್ಕೂ ಒತ್ತು ನೀಡಿ ಸಣ್ಣ ಗೊಂದಲವೂ ಇಲ್ಲದಂತೆ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಪ್ರಕ್ರಿಯೆ ಮಾಡಿ ಮುಗಿಸಿದ್ದಾರೆ. 3 ದಶಕಗಳಿಂದ ಪಶ್ಚಿಮ ಘಟ್ಟದ ವನವಾಸಿಗಳ ನಡುವೆ ಕೆಲಸ ಮಾಡುತ್ತಿರುವ ವನವಾಸಿ ಕಲ್ಯಾಣ ಆಶ್ರಮದ ಪೂರ್ಣಾವಧಿ ಕಾರ್ಯಕರ್ತ ಶಾಂತಾರಾಮ ಸಿದ್ದಿ, ಸಮಾಜದಲ್ಲಿ ಸಾಮರಸ್ಯ ಉದ್ದೀಪನಗೊಳಿಸಲು ಚಟುವಟಿಕೆ ನಡೆಸುತ್ತಿರುವ ಲೇಖಕ, ಅರ್ಥಶಾಸ್ತ್ರ ಉಪನ್ಯಾಸಕ ಡಾ. ತಳವಾರ್ ಸಾಬಣ್ಣ ಅವರಿಗೆ ಪರಿಷತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಆ ಮೂಲಕ ರಾಜ್ಯಸಭೆಗೆ ಮಾಡಿದ ಅಚ್ಚರಿ ಆಯ್ಕೆ ಸಂಪ್ರದಾಯವನ್ನು ಬಿಜೆಪಿ ಮೇಲ್ಮನೆಯಲ್ಲೂ ಮುಂದುವರಿಸಿದೆ.

ಮುಂದಿದೆ ಸಂಪುಟ ಸವಾಲು: ಪರಿಷತ್ ನಾಮನಿರ್ದೇಶನದ ಬಳಿಕ ಮತ್ತೊಂದು ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆಯ ಕಸರತ್ತಿಗೆ ಸಿಎಂ ಯಡಿಯೂರಪ್ಪ ಕೈ ಹಾಕಬೇಕಿದೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ, ‘ಅನರ್ಹ ಶಾಸಕ’ ಎಂಬ ಹಣೆಪಟ್ಟಿ ಹೊತ್ತುಕೊಂಡವರ ಪೈಕಿ ರೋಷನ್ ಬೇಗ್, ಮುನಿರತ್ನ, ಮಸ್ಕಿ ಪ್ರತಾಪ್​ಗೌಡ ಹೊರತುಪಡಿಸಿ ಉಳಿದವರೆಲ್ಲರೂ ‘ಅರ್ಹ’ರೆನಿಕೊಂಡಿದ್ದು, ಈ ಪಟ್ಟಿಯಲ್ಲಿದ್ದ 10 ಮಂದಿ ಸಚಿವರಾಗಿದ್ದಾರೆ. ಇದೀಗ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ವಿಶ್ವನಾಥ್ ಸಂಪುಟ ಸೇರುವ ಅರ್ಹತೆಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಎಲ್ಲರಿಗೂ ಅವಕಾಶ ನೀಡಬೇಕಾದ ಹೊಣೆಗಾರಿಕೆ ಬಿಎಸ್​ವೈ ಮೇಲಿದೆ. ಇವರೊಂದಿಗೆ ಉಮೇಶ್ ಕತ್ತಿ, ಮುರುಗೇಶ ನಿರಾಣಿ, ತಿಪ್ಪಾರೆಡ್ಡಿ, ಬಸನಗೌಡ ಯತ್ನಾಳ್ ಸೇರಿ ಹಲವರು ಸಂಪುಟ ಸೇರಲು ತಹತಹಿಸುತ್ತಿದ್ದಾರೆ.

ಸದ್ಯ ಬಿಎಸ್​ವೈ ಸೇರಿ ಸಂಪುಟದಲ್ಲಿ 28 ಮಂದಿ ಇದ್ದಾರೆ. ಇನ್ನು ಆರು ಸಚಿವ ಸ್ಥಾನ ತುಂಬಿಕೊಳ್ಳಲು ಅವಕಾಶವಿದೆ. ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಉಮೇಶ್ ಕತ್ತಿಯವರಿಗೆ ಸಚಿವ ಸ್ಥಾನ ದೊರಕುವುದು ಖಚಿತ. ವಿಶ್ವನಾಥ್ ಮತ್ತು ಸಿ.ಪಿ.ಯೋಗೇಶ್ವರ್ ಸಚಿವ ಸ್ಥಾನದ ಆಕಾಂಕ್ಷಿಗಳಾದರೂ ಸದ್ಯಕ್ಕೆ ಅವರಿಬ್ಬರಿಗೆ ಅವಕಾಶ ಕಷ್ಟ ಎಂಬ ಮಾತು ಬಿಜೆಪಿ ವಲಯದಲ್ಲಿದೆ. ಒಂದು ವೇಳೆ ಬಿಎಸ್​ವೈ ಮನವೊಲಿಸಲು ಸಫಲರಾದರೆ ಇವರಿಗೆ ಅವಕಾಶ ಸಿಕ್ಕರೂ ಸಿಗಬಹುದು ಎಂಬ ವಾದವೂ ಇದೆ. ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವ ಸಾಧ್ಯತೆ ತಕ್ಷಣಕ್ಕೆ ಕಾಣಿಸುತ್ತಿಲ್ಲ. ಹೀಗಾಗಿ ಮುನಿರತ್ನ, ಪ್ರತಾಪ್ ಗೌಡ ಪಾಲಿಗೆ ಮೀಸಲಿರುವ ಸ್ಥಾನವನ್ನು ಬೇರೆಯವರಿಗೆ ನೀಡಿ, ಚುನಾವಣೆ ಬಳಿಕ ಸಂಪುಟ ಪುನಾರಚನೆ ಮಾಡಿ ಅವರಿಬ್ಬರಿಗೆ ಅವಕಾಶ ನೀಡಬಹುದೆಂಬ ಲೆಕ್ಕಾಚಾರ ಪಕ್ಷದ ಮುಂದಿದೆ.

ಶಾಸಕರಾದ ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್ ಅಥವಾ ಕೆ.ಜಿ.ಬೋಪಯ್ಯ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅಥವಾ ಅಂಗಾರ, ಅರವಿಂದ ಲಿಂಬಾವಳಿ ಅಥವಾ ಸುನೀಲ್ ಕುಮಾರ್ ಪೈಕಿ ಮೂವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಸಂಪುಟ ವಿಸ್ತರಣೆಯಾದರೂ ಖಾತೆ ಹೊಂದಾಣಿಕೆಯ ಅನಿವಾರ್ಯತೆಯೂ ಎದುರಾಗುವುದು.

ದಡ ಸೇರಿಸಿದರು...

ಸರ್ಕಾರ ರಚನೆಗೆ ಮುನ್ನ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಎಚ್.ವಿಶ್ವನಾಥ್ ಮತ್ತು ಸಿ.ಪಿ.ಯೋಗೇಶ್ವರ್ ಅವರನ್ನು ಆಯ್ಕೆ ಮಾಡಿ ರಾಜಕೀಯ ದಡ ಸೇರಿಸುವಲ್ಲಿ ಬಿಎಸ್​ವೈ ಸಫಲರಾಗಿದ್ದಾರೆ. ಪಕ್ಷ ಸಂಘಟನೆ ದೃಷ್ಟಿಯಿಂದ ಭಾರತಿ ಶೆಟ್ಟಿಯವರಿಗೆ ಮರುಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಈ ಆಯ್ಕೆಗಾಗಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಬೇಕಿತ್ತು, ಅಲ್ಲಿ ಒಂದಷ್ಟು ಹೆಸರು ಪ್ರಸ್ತಾಪವಾಗಿ ಚರ್ಚೆ ನಡೆದು ಪಕ್ಷದ ವರಿಷ್ಠರಿಗೆ ಹೆಸರು ಕಳಿಸಬೇಕಿತ್ತು. ಕರೊನಾ ಸಾಂಕ್ರಾಮಿಕ ಹಿನ್ನೆಲೆ ಕೋರ್ ಕಮಿಟಿ ಹೊರತಾಗಿ ಚರ್ಚೆ ನಡೆಸಿ, ಪ್ರಮುಖರ ಅಭಿಪ್ರಾಯ ಪಡೆದು ಆಯ್ಕೆ ಪಟ್ಟಿಗೆ ಪಕ್ಷದ ವರಿಷ್ಠರಿಂದಲೂ ಒಪ್ಪಿಗೆ ಪಡೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್ ಕಟೀಲ್ ಸಿಎಂ ಮನೆಗೆ ಭೇಟಿ ನೀಡಿ ಚರ್ಚೆ ಮಾಡಿದ್ದು ಇಲ್ಲಿ ಉಲ್ಲೇಖನೀಯ.

ಕೆಲಸ ಮಾಡದ ಅಪಸ್ವರ

ಕೆಲ ದಿನಗಳ ಹಿಂದೆ ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್, ಭಾರತಿ ಶೆಟ್ಟಿ ಹೆಸರು ಮುನ್ನೆಲೆಗೆ ಬಂದ ಸಂದರ್ಭದಲ್ಲಿ ಪಕ್ಷದ ಕೆಲವು ನಾಯಕರೇ ಅಪಸ್ವರ ಎತ್ತಿದ್ದರು. ದೆಹಲಿ ನಾಯಕರಿಗೂ ಕೂಗನ್ನು ಮುಟ್ಟಿಸಿದ್ದರು. ಆದರೆ, ಅಂತಿಮವಾಗಿ ಬಿಎಸ್​ವೈ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ, ‘ಬಿಎಸ್​ವೈ ಕೊಟ್ಟ ಮಾತು ತಪ್ಪಲ್ಲ’ ಎಂಬುದನ್ನು ಮತ್ತೊಮ್ಮೆ ನಿಜವಾಗಿಸಿದ್ದಾರೆ. ರಾಜ್ಯಸಭೆ ಆಯ್ಕೆ ಸಂದರ್ಭದಲ್ಲಿ ಹಿಂದುಳಿದ ಸಮುದಾಯಕ್ಕೆ ಮಣೆ ಹಾಕಿದ್ದ ಬಿಜೆಪಿ ಈಗಲೂ ಅದೇ ದಾರಿಯಲ್ಲಿ ಹೆಜ್ಜೆಯಿರಿಸಿರುವುದು ಗಮನಾರ್ಹ.