ಜಿಲ್ಲೆ

ಕೆರೆ ಕೋಡಿ ಬಿದ್ದು ಹರಿದುಹೋದ ಮೀನುಗಳು... ಗುತ್ತಿಗೆದಾರರ ಬದುಕು ಹೈರಾಣ

ದಾವಣಗೆರೆ: ರಾಜ್ಯದಲ್ಲಿ ವಿಪರೀತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ದಾವಣಗೆರೆ ಜಿಲ್ಲೆಯ ಮೀನುಗಾರರ ಬದುಕು ಹೈರಾಣಾಗಿದೆ. ಕೆರೆಗಳು ಕೋಡಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ನೀರಿನಲ್ಲಿ ಹರಿದು ಹೋಗುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ ದೊಡ್ಡ ಕೆರೆ ಕೋಡಿ ಬಿದ್ದು ಕೆರೆ ಗುತ್ತಿಗೆ ಪಡೆದು ಮೀನು ಬೆಳೆಸುತ್ತಿದ್ದ ಮೀನುಗಾರರು ಸಾಲದ ಸುಳಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ನಷ್ಟ ಅನುಭವಿಸಿರುವ ಮೀನುಗಾರರು ಪರಿಹಾರ ಒದಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗ್ರಾಮದ ನಿವಾಸಿ ಕಮಲ ನಾಯ್ಕ ಮತ್ತು ಪಾಲುದಾರರು ಇದೇ ರೀತಿಯಾಗಿ ನಷ್ಟ ಅನುಭವಿಸಿದ್ದರ ಬಗ್ಗೆ ಸುದ್ದಿಗಾರರಿಗೆ ಹೇಳಿಕೊಂಡಿದ್ದಾರೆ. ನಾಲ್ಕು ಲಕ್ಷ ರೂಪಾಯಿ ತೆತ್ತು ಕೆರೆ ಲೀಸ್‌ಗೆ ಪಡೆದಿದ್ದ ಅವರು, 12 ಲಕ್ಷ ರೂ. ಮೌಲ್ಯದ ಮೀನು ಮರಿಗಳನ್ನು ಕೆರೆಗೆ ಬಿಟ್ಟಿದ್ದರು. ಮೀನುಗಳು ಚೆನ್ನಾಗಿ ಬೆಳೆದಿದ್ದವು. ಕೆಲವೇ ದಿನಗಳಲ್ಲಿ ಮೀನು ಹಿಡಿದು ಮಾರಾಟ ಮಾಡಲು ಯೋಜಿಸಿದ್ದರು. ಆದರೆ ನಿನ್ನೆ ರಾತ್ರಿ ಸುರಿದ ನಿರಂತರ ಮಳೆಗೆ ಕೆರೆ ಕೋಡಿ ಬಿದ್ದಿದ್ದು, ಮೀನುಗಳೆಲ್ಲಾ ಕೋಡಿಯಿಂದ ಹರಿದ ನೀರಲ್ಲಿ ಚಾನೆಲ್‌ ಪಾಲಾಗಿವೆ.