

ಪ್ಯಾರಿಸ್/ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರು ಜಿ20 ಟ್ರೇಡ್ ಮಿನಿಸ್ಟರ್ಸ್ ಮೀಟ್ಗಾಗಿ ಇಟಲಿಯ ಸೊರ್ರೆಂಟೋಗೆ ತೆರಳಿದ್ದಾರೆ. ಅಲ್ಲಿ ಇಟಲಿ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಫ್ರಾನ್ಸ್ ಮತ್ತಿತರ ರಾಷ್ಟ್ರಗಳ ಸಚಿವರು ಮತ್ತು ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ಅಂತರಾಷ್ಟ್ರೀಯ ವ್ಯಾಪಾರ-ವಹಿವಾಟಿಗೆ ಸಂಬಂಧಿಸಿದ ಮಾತುಕತೆ ನಡೆಸುತ್ತಿದ್ದಾರೆ.
ತಮ್ಮ ಇಟಲಿ ಭೇಟಿಯ ಬಗ್ಗೆ ಟ್ವಿಟರ್ನಲ್ಲಿ ನಿಯಮಿತವಾಗಿ ಮಾಹಿತಿ ನೀಡುತ್ತಿರುವ ಸಚಿವ ಗೋಯಲ್, ಜಿ20 ಟ್ರೇಡ್ ಮೀಟ್ಗೆ ಮುಂಚಿತವಾಗಿ ಇಟಲಿಯ ವಿದೇಶಾಂಗ ಸಚಿವ ಲ್ಯೂಗಿ ಡಿ ಮಾಯೊ ಅವರನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ. "ಯೂರೋಪಿಯನ್ ಯೂನಿಯನ್ನಲ್ಲಿ ಇಟಲಿಯು ಭಾರತದ 5ನೇ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆಗಿದೆ. ಅದು ಪ್ರಯಾಣಕ್ಕಾಗಿ ಕೋವಿಶೀಲ್ಡ್ ಕರೊನಾ ಲಸಿಕೆಗೆ ಮಾನ್ಯತೆ ನೀಡಿರುವುದು ನಮ್ಮ ದ್ವಿಪಕ್ಷೀಯ ಸಂಬಂಧಗಳು ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತದೆ" ಎಂದು ಬರೆದ್ದಾರೆ.
ಇದೇ ಸಂದರ್ಭದಲ್ಲಿ ಇಂಗ್ಲೆಂಡಿನ ಅಂತರರಾಷ್ಟ್ರೀಯ ವ್ಯಾಪಾರದ ಕಾರ್ಯದರ್ಶಿಯಾದ ಆನ್ನೆ-ಮಾರೀ ಟ್ರೆವೆಲ್ಯಾನ್ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾಗಿ ಗೋಯಲ್ ತಿಳಿಸಿದ್ದಾರೆ. "ಭಾರತ ಮತ್ತು ಯುಕೆ ನಡುವಿನ ವೇಗದ ಎಫ್ಟಿಎ ಮಾತುಕತೆಗಳು ದ್ವಿಪಕ್ಷೀಯ ಆರ್ಥಿಕ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಒಯ್ಯುತ್ತದೆ; ಉಭಯ ರಾಷ್ಟ್ರಗಳಲ್ಲೂ ಆರ್ಥಿಕ ಸಮೃದ್ಧಿ ಉಂಟುಮಾಡುತ್ತದೆ" ಎಂದಿದ್ದಾರೆ.
ದಕ್ಷಿಣ ಆಫ್ರಿಕಾದ ವ್ಯಾಪಾರ ಮತ್ತು ಕೈಗಾರಿಕಾ ಸಚಿವ ಎಬ್ರಾಹಿಂ ಪಟೇಲ್ರನ್ನೂ ಗೋಯಲ್ ಭೇಟಿಯಾಗಿದ್ದಾರೆ. "ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ-ವಹಿವಾಟಿನ ವಿಸ್ತರಣೆಯು ಭವಿಷ್ಯದ ಅಭಿವೃದ್ಧಿಗೆ ಇರುವ ಅಗಾಧ ಅವಕಾಶಕ್ಕೆ ಸಾಕ್ಷಿಯಾಗಿದೆ; ವಿಶೇಷವಾಗಿ, ಕೃಷಿ ಸರಕುಗಳ ಕ್ಷೇತ್ರದಲ್ಲಿ ಅವಕಾಶಗಳಿವೆ" ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.