ಸಮುದ್ರದ ಮಧ್ಯೆ ಬುಲ್‌ಟ್ರಾಲ್ ಮಾಡುತ್ತಿರುವ ಮೀನುಗಾರಿಕೆ ಬೋಟ್‌ನ್ನು ನಾಡದೋಣಿ ಮೀನುಗಾರರು ತಡೆದು ಪ್ರತಿಭಟನೆ ನಡೆಸಿದರು 
ಜಿಲ್ಲೆ

ಸಮುದ್ರದ ಮಧ್ಯೆ ಮೀನುಗಾರರ ಹೋರಾಟ

ಗಂಗೊಳ್ಳಿ: ಸಮುದ್ರದ ಮಧ್ಯೆ ಬುಲ್‌ಟ್ರಾಲ್ ಮಾಡುತ್ತಿರುವ ಮೀನುಗಾರಿಕೆ ಬೋಟ್‌ನ್ನು ನಾಡದೋಣಿ ಮೀನುಗಾರರು ತಡೆದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ ಖಾರ್ವಿ ನೇತೃತ್ವದಲ್ಲಿ ಸುಮಾರು ನೂರಕ್ಕೂ ಹೆಚ್ಚು ನಾಡದೋಣಿ ಮೀನುಗಾರರು ಒಟ್ಟಾಗಿ ಮರವಂತೆ ಮತ್ತು ನಾವುಂದದ ಸಮೀಪ ಸಮುದ್ರದ ಮಧ್ಯೆ ಬುಲ್‌ಟ್ರಾಲ್ ಮಾಡುತ್ತಿರುವ ಬೋಟ್‌ನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿ, ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಟ್ರಾಲ್‌ಬೋಟ್‌ನವರು ಸಮುದ್ರದ ತೀರ ಪ್ರದೇಶದಲ್ಲಿ ಬುಲ್‌ಟ್ರಾಲ್ ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ, ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ನಾಡದೋಣಿ ಮೀನುಗಾರರು, ಬುಲ್‌ಟ್ರಾಲ್ ಮುಂದುವರಿದರೆ ನಾಡದೋಣಿ ಮೀನುಗಾರರ ಕುಟುಂಬ ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗುವುದರಲ್ಲಿ ಸಂಶಯವಿಲ್ಲ ಹಾಗೂ ನಾಡ ದೋಣಿ ಮೀನುಗಾರರಿಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ನಾಡದೋಣಿಯ ಆಯಾಯ ಭಾಗದ ಮೀನುಗಾರರು ತೀರದ ಪ್ರದೇಶದಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ ಮಾಡುವ ಬೋಟ್‌ಗಳನ್ನು ತಡೆದು, ಬುಲ್‌ಟ್ರಾಲ್‌ನಿಂದ ನಮಗೂ ನಿಮಗೂ ತೊಂದರೆ ಆಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ಇದು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳಿದೆ ಎಂದು ಮನವಿ ಮಾಡಿದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಚಿವರು ಮತ್ತು ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಡದೋಣಿ ಮೀನುಗಾರರು ಆಗ್ರಹಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಮೀನುಗಾರರು ಮುಷ್ಕರಕ್ಕೆ ಇಳಿಯಲು ಎಡೆಮಾಡಿಕೊಡಬಾರದೆಂದು ಮನವಿ ಮಾಡಿದ್ದಾರೆ.