ಜಿಲ್ಲೆ

ಸಾಲಿಗ್ರಾಮ ಮೀನು ಮಾರುಕಟ್ಟೆ ಸಮಸ್ಯೆ ಪರಿಹಾರ; ಶಾಸಕ ಹಾಲಾಡಿ ಹಣದಿಂದಲೇ ತಾತ್ಕಾಲಿಕ ಮಾರುಕಟ್ಟೆ

Udupi

ಕೋಟ: ಸಾಲಿಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ನಿರ್ಮಿಸುವ ಉದ್ದೇಶದಿಂದ ಸಾಲಿಗ್ರಾಮ ಮೀನು ಮಾರುಕಟ್ಟೆಯನ್ನು ಬೇರೆ ಭಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಆಗಮಿಸಿ ಮೀನು ಮಾರಾಟಕ್ಕೆ ತಾತ್ಕಾಲಿಕ ಸ್ಥಳಕ್ಕೆ ವ್ಯವಸ್ಥೆ ಮಾಡಿದರು.

ಮೀನು ಮಾರುಕಟ್ಟೆ ಜಾಗ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ತೆರವಾಗುವುದರಿಂದ ಕಂಗೆಟ್ಟ ಮಹಿಳಾ ವ್ಯಾಪಾರಿಗಳ ಅಳಲು ಆಲಿಸಿದ ಶಾಸಕರು, ಸ್ವಂತ ಹಣದಲ್ಲೇ ಮೀನು ಮಾರುವ ಮಹಿಳೆಯರಿಗೆ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು. ಕೂಡಲೇ ಸ್ಥಳಕ್ಕೆ ಗುತ್ತಿಗೆದಾರರನ್ನು ಕೆರೆಸಿ ಮಾರುಕಟ್ಟೆ ನೀಲಿ ನಕ್ಷೆ ಸಿದ್ಧಪಡಿಸಿ ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.

ನವಯುಗ ಕಂಪನಿಯ ಇಂಜಿನಿಯರ್ ಕಾಶಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಮಾಹಿತಿ ಪಡೆದು, ಸೂಚನೆ ನೀಡಿದರು. ಸಾಲಿಗ್ರಾಮ ಪ.ಪಂ ಅಧ್ಯಕ್ಷೆ ಸುಲತಾ ಹೆಗ್ಡೆ, ಉಪಾಧ್ಯಕ್ಷೆ ಅನುಸೂಯ ಹೇರ್ಳೆ, ಸದಸ್ಯರಾದ ರಾಜು ಪೂಜಾರಿ, ರತ್ನಾ ನಾಗರಾಜ್ ಗಾಣಿಗ, ಭಾಸ್ಕರ್ ಬಂಗೇರ, ವಿರೋಧ ಪಕ್ಷದ ನಾಯಕ ಶ್ರೀನಿವಾಸ ಅಮೀನ್, ಪಪಂ ಮಾಜಿ ಸದಸ್ಯರಾದ ಕರುಣಾಕರ ಪೂಜಾರಿ, ಮಾಧವ ಕಾರ್ಕಡ, ಪಪಂ ಇಂಜಿನಿಯರ್ ರಾಜಶೇಖರ್, ಸಂಜೀವ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಮೂರು ಗಂಟೆ ಸ್ಥಳದಲ್ಲಿದ್ದ ಶಾಸಕರು: ಶಾಸಕ ಶ್ರೀನಿವಾಸ ಶೆಟ್ಟಿ, ಬಿಸಿಲಿನ ನಡುವೆ ಮೂರು ಗಂಟೆಗೂ ಅಧಿಕ ಹೊತ್ತು ಸಾಲಿಗ್ರಾಮದಲ್ಲಿದ್ದು ಸಮಸ್ಯೆ ಆಲಿಸಿ ಸಂಬಂಧಪಟ್ಟ ಇಲಾಖೆ, ಪ.ಪಂ.ಗೆ ಪರಿಹಾರ ಕ್ರಮ ಸೂಚಿಸಿ ಸ್ಥಳೀಯರ ಪ್ರಶಂಸೆಗೆ ಪಾತ್ರರಾದರು. ಬೀದಿ ವ್ಯಾಪಾರಸ್ಥರ ಅಳಲನ್ನು ಆಲಿಸಿ, ನಿಮ್ಮ ಅಂಗಡಿ ಮುಂಗಟ್ಟು ಸ್ಥಳವನ್ನು ಹೆದ್ದಾರಿ ಇಲಾಖೆ ಒತ್ತುವರಿ ಮಾಡಿದ ಬಳಿಕ ಉಳಿದ ಸ್ಥಳದಲ್ಲಿ ಪಟ್ಟಣ ಪಂಚಾಯಿತಿ ಮೂಲಕ ಸುಸಜ್ಜಿತ ಅಂಗಡಿ ಕೋಣೆ ನಿರ್ಮಿಸಿ ಕೊಡಲಾಗುವುದು ಎಂದರು. ಸ್ಥಳೀಯ ರಿಕ್ಷಾ ಚಾಲಕರು, ಮಾರುಕಟ್ಟೆ ನಿರ್ಮಿಸುವುದರಿಂದ ತಮ್ಮ ನಿಲ್ದಾಣ ಸ್ಥಳಕ್ಕೆ ಕುಂದು ಬರುತ್ತದೆ, ನಮ್ಮ ಜೀವನಕ್ಕೆ ಆಸರೆ ಕಲ್ಪಿಸಿ ಎಂದು ಮನವಿ ಮಾಡಿದರು. ಸ್ಪಂದಿಸಿದ ಶಾಸಕರು, ಪ್ರಸ್ತುತ ಇರುವ ಸ್ಥಳದಲ್ಲಿ ಗೊಂದಲವಿಲ್ಲದೆ ರಿಕ್ಷಾ ನಿಲ್ದಾಣಕ್ಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.