ಹೆಬ್ರಿ: ಕೇವಲ ನೂರು ಶೇಕಡ ಫಲಿತಾಂಶ ನೀಡುವ ಸಂಸ್ಥೆ ಉತ್ತಮ ಸಂಸ್ಥೆ ಆಗದು, ಬದಲಾಗಿ ಉತ್ತಮ ಫಲಿತಾಂಶದ ಜತೆ ಅನ್ನ ಸಂಪಾದನೆಗೆ ದಾರಿ ಮಾಡಿಕೊಡುವ, ಮೌಲ್ಯಭರಿತ, ಋಣ ಪ್ರಜ್ಞೆ, ದೇವರ ಬಗ್ಗೆ ಭಯ, ಭಕ್ತಿ ಹುಟ್ಟಿಸುವ ಶಿಕ್ಷಣ ನೀಡುವ ಸಂಸ್ಥೆ ಉತ್ತಮ ಸಂಸ್ಥೆ ಎನಿಸಿಕೊಳ್ಳುತ್ತದೆ ಎಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯಶಿಕ್ಷಕ ಮುನಿರಾಜ ರೆಂಜಾಳ ಹೇಳಿದರು.
ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಜೀವನದ ಗುರಿ ಸಾಧನೆಗಾಗಿ ದೊಡ್ಡ ಎತ್ತರಕ್ಕೆ ಏರುವ ಗುರಿ ಇಟ್ಟುಕೊಳ್ಳಬೇಕು. ಗುರಿಯ ಈಡೇರಿಕೆಗಾಗಿ ಉದಾಸೀನ ತೋರದೆ, ಕೆಲಸ ಮುಂದೂಡದೆ, ಕೆಟ್ಟ ಆಕರ್ಷಣೆ ಒಳಗಾಗದೆ, ಸಮಯ ವ್ಯರ್ಥ ಮಾಡದೆ, ಭಾವನೆಗಳನ್ನು ಹತೋಟಿಯಲ್ಲಿಟ್ಟು ವಿದ್ಯಾಭ್ಯಾಸ ಮಾಡಬೇಕು ಎಂದರು.
ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಪಿಆರ್‌ಒ ವಿಜಯ್ ಕುಮಾರ್ ಶೆಟ್ಟಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಸುಹಾಸ್ ನಿರೂಪಿಸಿ, ವಂದಿಸಿದರು.