ಜಿಲ್ಲೆ

ರಾಜ್ಯ ರಾಜಧಾನಿಯಲ್ಲೇ ಇದೆ ಸಾವಿನ ಫ್ಯಾಕ್ಟರಿ! ಸ್ಥಳಕ್ಕೆ ದೌಡಾಯಿಸಿದ ಸಚಿವ ಬೊಮ್ಮಾಯಿ

ಆನೇಕಲ್/ ಬೆಂಗಳೂರು: ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿ ಸ್ಫೋಟಗೊಂಡ ಕೆಮಿಕಲ್ ಫ್ಯಾಕ್ಟರಿಯನ್ನು ಅಕ್ರಮವಾಗಿ ಸ್ಥಾಪಿಸಲಾಗಿತ್ತು ಎಂಬ ರಹಸ್ಯ ಬಯಲಾಗಿದ್ದು, ಬೆಂಕಿ ಅವಘಡದ ಬಳಿಕ ಇಲ್ಲಿನ ಅವ್ಯವಸ್ಥೆ ಅನಾವರಣಗೊಂಡಿದೆ. ರಾಜ್ಯ ರಾಜಧಾನಿಯಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ತಲೆಎತ್ತಿ ಕೋಟ್ಯಂತರ ವ್ಯವಹಾರ ನಡೆಸುತ್ತಿದ್ದ ಈ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಸಚಿವ ಬಸವರಾಜ ಬೊಮ್ಮಾಯಿ ದೌಡಾಯಿಸಿದ್ದಾರೆ.

ಮಂಗಳವಾರ ಈ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ಉಂಟು ಮಾಡಿದ ಹಾನಿ ಅಷ್ಟಿಷ್ಟಲ್ಲ. ಸುಮಾರು 12 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಬೆಂಕಿಯ ತೀವ್ರತೆಯನ್ನು ತಗ್ಗಿಸಲಾಯಿತು. ಬಳಿಕ 17 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸಂಪೂರ್ಣವಾಗಿ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ, ಸಿವಿಲ್ ಡಿಫೆನ್ಸ್, ಎಸ್​ಡಿಆರ್​ಎಫ್​ ಯಶಸ್ವಿಯಾದರು. ಈ ಘಟನೆಯಲ್ಲಿ ಅಕ್ಕಪಕ್ಕದ 9 ಮನೆಗೆ ಹಾನಿಯಾಗಿದ್ದು, ಎಂಟು ವಾಹನ ಬೆಂಕಿಗೆ ಆಹುತಿಯಾಗಿವೆ. ಹದಿನೈದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಂದಹಾಗೆ ಈ ಫ್ಯಾಕ್ಟರಿ ರೇಖಾ ಇಂಡಸ್ಟ್ರೀಸ್​ ಹೆಸರಿನಲ್ಲಿ ಅಕ್ರಮವಾಗಿ ತಲೆಎತ್ತಿತ್ತು. ಕತ್ತಲೆ ಕೋಣೆಯಂತಿದ್ದ ಈ ಫ್ಯಾಕ್ಟರಿಯನ್ನ ಸಾವಿನ ಕೂಪ ಎಂದೇ ಹೇಳಲಾಗುತ್ತಿದೆ.

ದೊಮ್ಮಸಂದ್ರದ ರೇಖಾ ಇಂಡಸ್ಟ್ರೀಸ್​ ಮಾಲೀಕ ಸಜ್ಜನ್ ರಾಜ್ ಎಂಬಾತ ಹೊಸಗುಡ್ಡದಹಳ್ಳಿಯಲ್ಲಿ ಅಕ್ರಮವಾಗಿ ಫ್ಯಾಕ್ಟರಿಯನ್ನು ನಡೆಸುತ್ತಿದ್ದ. ಈ ಘಟಕಕ್ಕೆ ವಿದ್ಯುತ್ ಸಂಪರ್ಕವನ್ನೇ ಪಡೆದಿರಲಿಲ್ಲ. ಆಯಿಲ್ ಕಂಪನಿ ಇರುವ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿಯೇ ಇರಲಿಲ್ಲ. ಹಗಲಿನಲ್ಲಿ ಗೇಟ್ ಬಾಗಿಲು ಹಾಕಿ ಬ್ಯಾರೆಲ್​ಗಳಿಗೆ ಕೆಮಿಕಲ್ ತುಂಬಲಾಗುತ್ತಿತ್ತು. ಗಿಡಗಂಟಿ ಬೆಳೆದಿದ್ದರಿಂದ ಒಳಗೆ ಏನು ನಡೆಯುತ್ತಿದೆ ಎನ್ನುವುದೇ ಸ್ಥಳೀಯರಿಗೆ ಗೊತ್ತಾಗುತ್ತಿರಲಿಲ್ಲ. ಸ್ವಂತ ಜಾಗ ಇದ್ದರೂ ಇದೇ ರೀತಿ ಹಲವೆಡೆ ವಿದ್ಯುತ್ ಸಂಪರ್ಕ ಪಡೆದಿಲ್ಲ. ಕತ್ತಲಿನಲ್ಲೇ ಕಾರ್ಮಿಕರು ಕೆಲಸ ಮಾಡಬೇಕಿತ್ತು. ಬಹುತೇಕ ಕಾರ್ಮಿಕರು ಸಜ್ಜನ್ ರಾಜ್ ಊರಿನವರೇ ಆಗಿದ್ದರು. ಇನ್ನಷ್ಟು ಕಡೆ ಇದೇ ರೀತಿಯ ಫ್ಯಾಕ್ಟರಿಗಳು ಇದೆ ಎನ್ನಲಾಗಿದೆ.

ಬೊಮ್ಮಸಂದ್ರ ಕೈಗಾರಿಕಾ ಸಂಘಕ್ಕೂ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕೋಟಿಗಟ್ಟಲೆ ಆದಾಯ ಬರುತ್ತಿದ್ದರೂ ಯಾರಿಗೂ ಕಾಣಿಸಿಕೊಳ್ಳುತ್ತಿರಲಿಲ್ಲ ಸಜ್ಜನ್ ರಾಜ್. ಅಕ್ರಮವಾಗಿ ಗೋದಾಮುಗಳನ್ನು ನಿರ್ಮಿಸಿಕೊಂಡು ವ್ಯವಹಾರ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಒಟ್ಟಾರೆ ರಾಜ್ಯ ರಾಜಧಾನಿಯ ಸಮೀಪದಲ್ಲೇ ಸಾವಿನ ಫ್ಯಾಕ್ಟರಿಯಾಗಿ ಇದು ಮಾರ್ಪಟ್ಟಿದೆ ಎಂಬುದು ಬೆಂಕಿ ಅವಘಡದ ಬಳಿಕ ಬಯಲಿಗೆ ಬಂದಿದೆ.

ಘಟನೆ ಸಂಬಂಧ ಬಿಬಿಎಂಪಿ ವೈಫಲ್ಯ ಒಪ್ಪಿಕೊಂಡ ಕಮಿಷನರ್ ಮಂಜುನಾಥ್​ ಪ್ರಸಾದ್​, ಬೆಸ್ಕಾಂ, ಮಾಲಿನ್ಯ ಮಂಡಳಿ, ಹೆಲ್ತ್ ಡಿಪಾರ್ಟ್​ಮೆಂಟ್​ ಲೋಪವೂ ಇದೆ ಎಂದಿದ್ದಾರೆ. ಪ್ರಕರಣ ಸಂಬಂಧ ಫ್ಯಾಕ್ಟರಿ ಮಾಲೀಕ ಸಜ್ಜನ್ ರಾಜ್, ಇವರ ಪತ್ನಿ ಕಮಲಾ ಮತ್ತು ಪುತ್ರ ಅನಿಲ್​ನನ್ನು ಪೊಲೀಸರು ಬಂಧಿಸಿದ್ದಾರೆ.

ರೆಸಿಡೆನ್ಶಿಯಲ್ ಏರಿಯಾದಲ್ಲಿ ಇಂತಹ ಫ್ಯಾಕ್ಟರಿ ಇದ್ದರೆ ಅದನ್ನ ತೆರವು ಮಾಡಿಸುತ್ತೇವೆ ಎಂದಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್​, ನಷ್ಟ ಅನುಭವಿಸಿರುವ ಮನೆಗಳಿಗೆ ಫ್ಯಾಕ್ಟರಿ ಮಾಲೀಕರಿಂದಲೇ ಪರಿಹಾರ ಕೊಡಿಸಲಾಗತ್ತೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆ್ಯಕ್ಟ್ ಅಡಿಯಲ್ಲೂ ಪರಿಹಾರ ಒದಗಿಸಲಾಗತ್ತೆ. ಇಲ್ಲಿ ಪೆಟ್ರೋಲಿಯಂ ಪ್ರಾಡಕ್ಟ್ ಸ್ಟೋರೆಜ್ ಮಾಡಲು ಅನುಮತಿ ಇಲ್ಲ. ಸರ್ಕಾರದಿಂದ ಅನುಮತಿ ನೀಡಿರೋದು ಬೊಮ್ಮಸಂದ್ರದಲ್ಲಿನ ಫ್ಯಾಕ್ಟರಿಗೆ. ಅನುಮತಿ ಇಲ್ಲದಿದ್ದರೂ ಅಕ್ರಮವಾಗಿ ವ್ಯವಹಾರ ಮಾಡಲಾಗಿದೆ. ಫ್ಯಾಕ್ಟರಿ ಮಾಲೀಕರ ವಿರುದ್ಧ ಈಗಾಗಲೇ ಕ್ರಿಮಿನಲ್ ಕೇಸ್ ಬುಕ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಸಜ್ಜನ್ ರಾಜ್​ ಹಲವು ಕಡೆ ಇದೇ ರೀತಿಯ ಗೋದಾಮುಗಳನ್ನು ಹೊಂದಿದ್ದಾರೆ ಎಂದು ಬೊಮ್ಮಸಂದ್ರದಲ್ಲಿ ಮಾಹಿತಿ ನೀಡಿದ ಕಾರ್ಮಿಕ ಮಹಿರಾಂ, ಬಹುತೇಕ ಎಲ್ಲ ಕಡೆ ಸ್ವಂತ ಜಾಗ ನಮ್ಮದೇ ಆಗಿದೆ. ಸುಮಾರು 30 ವರ್ಷಗಳಿಂದ ನಾವು ಇದೇ ಕೆಲಸ ಮಾಡುತ್ತಿದ್ದೇವೆ. ಸಜ್ಜನ್ ಅವರು ಯಾವುದೇ ಕಂಪನಿಗಳ ಬಳಿ ಬರುವುದಿಲ್ಲ. ಅವರು ಕುಳಿತಲ್ಲೇ ಎಲ್ಲ ವ್ಯವಹಾರ ಮಾಡುತ್ತಾರೆ. ಸುರಕ್ಷತೆ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಹಲವು ವರ್ಷಗಳಿಂದ ಇದೇ ರೀತಿ ನಡೆದುಕೊಂಡು ಬಂದಿದೆ. ನಮಗೆ ಇವೆಲ್ಲವೂ ಅಭ್ಯಾಸ ಆಗಿದೆ ಎಂದರು.

ಅಗ್ನಿ ದುರಂತ ಸಂಭವಿಸಿದ ಫ್ಯಾಕ್ಟರಿಯಲ್ಲಿ ಆ್ಯಸಿಟೋನ್, ಮಿಥೈಲ್ ಕ್ಲೋರೈಡ್ ಹಾಗೂ ಆಲ್ಕೋಹಾಲ್ ಕಂಟೆಂಟ್ ಕೆಮಿಕಲ್ ಇರಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ಬುಧವಾರ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಥಳ ಪರಿಶೀಲಿಸಿದರು.

ಬಹಳ ದೊಡ್ಡ ಪ್ರಮಾಣದ ಅಗ್ನಿ ಅವಘಡ ಆಗಿದೆ. ಅಗ್ನಿಶಾಮಕದ 11 ಸಿಬ್ಬಂದಿಗೆ ಗಾಯಗಳಾಗಿವೆ. ಇಂಥಹ ಘಟಕ ಜನ ವಸತಿ ಸ್ಥಳದಲ್ಲಿ‌ ಇರುವುದು ಸರಿಯಲ್ಲ. ಜನ ವಸತಿಗೆ ಅನುಮತಿ ನೀಡಿದ ಮೇಲೆ ಇಂಥಹ ಕೆಮಿಕಲ್ ಘಟಕಕ್ಕೆ ಇರಲು ಅವಕಾಶ ನೀಡಬಾರದು. ಮಾಲೀಕರ ತಪ್ಪು ಎದ್ದು ಕಾಣ್ತಿದೆ. ದೊಡ್ಡಬೊಮ್ಮಸಂದ್ರದಲ್ಲಿ ಪರವಾನಗಿ ಪಡೆದು ಇಲ್ಲಿ ಘಟಕ ತೆರೆದಿದ್ದಾರೆ. ಇದರಿಂದ ನಾವು ಪಾಠ ಕಲಿಯಬೇಕಿದೆ. ಎಲ್ಲೆಲ್ಲಿ ಕೆಮಿಕಲ್ ಘಟಕಗಳಿವೆ ಎಂಬ ಪರಿಶೀಲನೆ ಆಗಬೇಕು. ಠಾಣಾವಾರು ಇಂಥಹ ಸುರಕ್ಷಿತವಲ್ಲದ ಘಟಕಗಳನ್ನ ಪತ್ತೆ ಹಚ್ಚಲು ಸೂಚಿಸಲಾಗಿದೆ ಎಂದರು.