ಜಿಲ್ಲೆ

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; 30 ಲಕ್ಷ ರೂ. ಅಧಿಕ ಮೌಲ್ಯದ ವಸ್ತುಗಳು ಅಗ್ನಿಗಾಹುತಿ

Webdesk - Manjunatha B

ಬೆಂಗಳೂರು: ಬೆಂಕಿಯ ಕೆನ್ನಾಲಿಗೆಗೆ ಎರಡು ಅಂತಸ್ತಿನ ಕಟ್ಟಡ ಒಂದು ಹೊತ್ತಿ ಉರಿದಿರುವ ಘಟನೆ ಬೆಂಗಳೂರು ನಗರದ ಉಪ್ಪಾರಪೇಟೆ ಪೊಲೀಸ್​ ಠಾಣೆ ವ್ಯಾಪ್ತಿಯ ಬಳೇಪೇಟೆಯಲ್ಲಿ ನಡೆದಿದೆ. ಕಟ್ಟಡದಲ್ಲಿ ಸಿಲುಕಿದ್ದ ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದ್ದು, ಬೆಂಕಿಯನ್ನು ನಂದಿಸುವ ಕಾರ್ಯ ಭರದಿಂದ ಸಾಗಿದೆ.

ಕಟ್ಟಡದಲ್ಲಿದ್ದ ಪೇಂಟಿಂಗ್ ಹಾಗೂ ಬ್ಯಾಗ್​ ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ ಎಂದು ವರದಿಯಾಗಿದೆ. ಜನವರಿ 26ರ ತಡರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಎರಡು ಅಂತಸ್ತಿನ ಕಟ್ಟಡ ಕೃಷ್ಣಮೂರ್ತಿ ಎಂಬುವರಿಗೆ ಸೇರಿದ್ದು, ಬೆಂಕಿ ಮೊದಲಿಗೆ  ಪೇಂಟ್ ಅಂಗಡಿಯಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಕಾಲಕ್ರಮೇಣ ಬೆಂಕಿ ಇಡೀ ಕಟ್ಟಡವನ್ನೇ ಆವರಿಸಿದೆ. ವಿಚಾರ ತಿಳಿದು ಅಗ್ನಿಶಾಮಕದಳ ಸ್ಥಳಕ್ಕೆ ದೌಡಾಯಿಸಿದ್ದು, ನಾಲ್ಕು ಘಂಟೆಗಳ ಸತತ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ತನಿಖೆಗೆ ಆದೇಶಿಸಲಾಗಿದ್ದು, ಘಟನೆಗೆ ನಿಖರ ಕಾರಣ ಏನು ಎಂಬುದರ ಕುರಿತು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.