ಬೆಂಗಳೂರು: ಪ್ರಥಮ ವರ್ತಮಾನ ವರದಿ (ಎಫ್ಐಆರ್) ಎಂದರೆ ವಿಶ್ವಕೋಶ (ಎನ್ಸೈಕ್ಲೋಪಿಡಿಯಾ) ಅಲ್ಲ. ಅಪರಾಧಕ್ಕೆ ಸಂಬಂಧಿಸಿದ ಪ್ರತಿ ವಿಚಾರವನ್ನೂ ಅದರಲ್ಲಿ ವಿವರಿಸಬೇಕೆಂಬ ನಿಯಮವಿಲ್ಲ ಎಂದಿರುವ ಹೈಕೋರ್ಟ್, ಎಫ್ಐಆರ್ನಲ್ಲಿ ತನ್ನ ಹೆಸರಿಲ್ಲದ ಕಾರಣ ಜಾಮೀನು ನೀಡಬೇಕೆಂದು ಕೋರಿ ಕೊಲೆ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಅರ್ಜುನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದ ಮಂಡಿಸಿ, ಮೃತನ ಸಹೋದರಿಯ ಹೇಳಿಕೆ ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ಅರ್ಜಿದಾರರ ಹೆಸರು ಉಲ್ಲೇಖಿಸಲಾಗಿಲ್ಲ. ಪ್ರತ್ಯಕ್ಷದರ್ಶಿಗಳು ಎನ್ನಲಾಗಿರುವ ವ್ಯಕ್ತಿಗಳು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅರ್ಜಿದಾರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಾಧಾರವಿಲ್ಲ. ಆದ್ದರಿಂದ ಜಾಮೀನು ನೀಡಬೇಕೆಂದು ಕೋರಿದ್ದರು.
ಈ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್, ಎಫ್ಐಆರ್ನಲ್ಲಿ ಅಪರಾಧದ ಪ್ರತಿಯೊಂದು ವಿವರವೂ ಇರಬೇಕು ಎಂಬ ನಿಯಮವಿಲ್ಲ. ಅದು ಎನ್ಸೈಕ್ಲೋಪಿಡಿಯಾ ಅಲ್ಲ. ಕೃತ್ಯದ ಮಾಹಿತಿ ಇದ್ದರೆ ಸಾಕು. ಪ್ರತ್ಯಕ್ಷ್ಯದರ್ಶಿಗಳು ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದಾದರೆ, ಅವರನ್ನು ನ್ಯಾಯಾಲಯದ ವಿಚಾರಣೆ ವೇಳೆ ಪಾಟೀ ಸವಾಲಿಗೆ ಒಳಪಡಿಸಲು ಅವಕಾಶವಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.