ಜಿಲ್ಲೆ

ನಿರಂತರ ವ್ಯವಹಾರದಿಂದ ಗೊಂದಲ ನಿವಾರಣೆ : ಲತೇಶ್ ಹೇಳಿಕೆ

ಗುರುಪುರ: ಇತ್ತೀಚಿನ ಆರ್ಥಿಕ ವರ್ಷಗಳಲ್ಲಿ ಬ್ಯಾಂಕ್‌ಗಳು ಸಾಲ ನೀಡಲು ಮಾತ್ರ ಸೀಮಿತವಾಗಿಲ್ಲ. ಪ್ರಸಕ್ತ ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನ ವ್ಯವಸ್ಥೆಯಡಿ ಬ್ಯಾಂಕ್‌ಗಳು ಗ್ರಾಹಕರಿಗೆ ಹಲವು ಯೋಜನೆ ತಲುಪಿಸುವ ಕೆಲಸ ಮಾಡುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಹಣಕಾಸು ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್‌ಗಳ ಮೂಲಕ ಲಭ್ಯವಿದೆ. ಗ್ರಾಹಕರು ಬ್ಯಾಂಕ್‌ನೊಂದಿಗೆ ನಿರಂತರ ವ್ಯವಹಾರ ಇಟ್ಟುಕೊಳ್ಳುವುದರಿಂದ ಗೊಂದಲ/ಸಮಸ್ಯೆ ನಿವಾರಿಸಲು ಸಾಧ್ಯ ಎಂದು ಲೀಡ್ ಬ್ಯಾಂಕ್ ಆರ್ಥಿಕ ಸುರಕ್ಷತಾ ಮಾಹಿತಿದಾರ ಲತೇಶ್ ಹೇಳಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನಬಾರ್ಡ್ ಆಶ್ರಯದಲ್ಲಿ ಶುಕ್ರವಾರ ಕುಪ್ಪೆಪದವಿನ ಬ್ಯಾಂಕ್ ಶಾಖೆಯಲ್ಲಿ ‘ಗ್ರಾಹಕರಿಗೆ ಆರ್ಥಿಕ ಅರಿವು-ಜಾಗೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ಯಾಂಕ್ ಹಿರಿಯ ಗ್ರಾಹಕ ಪ್ರವೀಣ್ ಕುಮಾರ್ ಅಗರಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಅಜಿತ್ ಕುಮಾರ್ ಜೈನ್, ಬ್ಯಾಂಕ್‌ನ ಗ್ರಾಹಕರು ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕಿ ಸಂಧ್ಯಾ ಸ್ವಾಗತಿಸಿ. ಸಿಬ್ಬಂದಿ ಧನ್ಯಶ್ರೀ ವಂದಿಸಿದರು.