ಕೋಲಾರ: ಇದು ಹಾಲು ಉತ್ಪಾದಕರ ನಡುವೆಯೇ ನಡೆದ ಜಗಳ. ಅಂದರೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಹಾಗೂ ನಿರ್ದೇಶಕರ ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಹೊಯ್ಕೈ ಹಂತಕ್ಕೂ ಹೋಗಿ, ಎರಡೂ ಗುಂಪಿನವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂಥ ಪರಿಸ್ಥಿತಿಯೂ ಉಂಟಾಗಿದೆ.
ಕೋಲಾರದ ಹೂಹಳ್ಳಿ ಗ್ರಾಮದಲ್ಲಿ ಇಂಥದ್ದೊಂದು ಗುಂಪುಘರ್ಷಣೆ ನಡೆದಿದೆ. ರಸ್ತೆಯ ವಿಚಾರವಾಗಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಹಾಗೂ ನಿರ್ದೇಶಕ ಈರಪ್ಪ ಎಂಬವರ ಗುಂಪುಗಳ ನಡುವೆ ಮಾರಾಮಾರಿಯೇ ನಡೆದಿದೆ.
ಈ ಹೊಯ್ಕೈಯಲ್ಲಿ ಎರಡೂ ಗುಂಪುಗಳ ಹಲವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಎರಡೂ ಗುಂಪುಗಳಿಂದ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.