ಬೆಂಗಳೂರು: ಐದನೇ ತರಗತಿ ವಿದ್ಯಾರ್ಥಿನಿಗೆ ಬೆತ್ತದಿಂದ ಮನ ಬಂದಂತೆ ಥಳಿಸಿದ್ದಾರೆ ಎಂಬ ಆರೋಪದಡಿ ಇದೀಗ ನಗರದ ಪೊಲೀಸರು, ಪ್ರಾಂಶುಪಾಲರನ್ನು(Principal Arrest) ಬಂಧಿಸಿದ್ದಾರೆ.
ಜಿಲ್ಲೆಯ ವಿಸ್ಡಮ್ ಇಂಗ್ಲಿಷ್ ಶಾಲೆಯ ಕಿರಣ್ ಕುಮಾರ್ ಬಂಧಿತ ಪ್ರಿನ್ಸಿಪಾಲ್. ವಿದ್ಯಾರ್ಥಿನಿಯ ಕೈ-ಕಾಲುಗಳ ಮೇಲೆ ಬೆತ್ತದ ಗುರುತುಗಳು ಮೂಡುವಂತೆ ಬಲವಾಗಿ ಹೊಡೆದಿದ್ದಾರೆ ಎಂದು ವಿದ್ಯಾರ್ಥಿನಿ ತಂದೆ ಕೊಟ್ಟ ದೂರಿನ ಮೇರೆಗೆ ಕಿರಣ್ ವಿರುದ್ಧ ಬಾಲಾಪರಾಧ ನ್ಯಾಯ ಮತ್ತು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಡೊನಾಲ್ಡ್ರ ನೂತನ DOGE ನೇಮಕಾತಿಗೆ ಅರ್ಜಿ ಆಹ್ವಾನ; ಈ ರೀತಿಯ ಅಭ್ಯರ್ಥಿಗಳೇ ಬೇಕು ಎಂದ Elon Musk
ಪ್ರಕರಣದ ಹಿನ್ನೆಲೆ
ಬುಧವಾರ (ನ.13) ಸಂಜೆ ಶಾಲೆ ಮುಗಿಸಿ ನನ್ನ ಮಗಳು ಮನೆಗೆ ಬಂದಾಗ ಅವಳ ಮೈಮೇಲೆ ಇರುವ ಗುರುತುಗಳನ್ನು ಗಮನಿಸಿದೆ. ಅವಳನ್ನು ಕೇಳಿದಾಗ ಪ್ರಿನ್ಸಿಪಾಲ್ ಥಳಿಸಿದ್ದಾರೆ ಎಂದಳು. ಹೀಗಾಗಿ, ನಾನು ಮರುದಿನ ಶಾಲೆಗೆ ತೆರಳಿ ವಿಚಾರಿಸಿದೆ. ಆದರೆ, ಯಾರಿಂದಲೂ ಸಮರ್ಪಕ ಉತ್ತರ ದೊರೆಯಲಿಲ್ಲ. ಮಕ್ಕಳನ್ನು ಮತ್ತು ಅಲ್ಲಿರುವ ಕೆಲವರನ್ನು ವಿಚಾರಿಸಿದಾಗ ಪ್ರಿನ್ಸಿಪಾಲ್ಗೆ ಒಬ್ಬ ಅಂಗವಿಕಲ ಮಗನಿದ್ದು, ಅವನಿಗೆ ಎಲ್ಲದಕ್ಕೂ ಸಹಾಯ ಮಾಡುವಂತೆ ಶಾಲೆಯಲ್ಲಿರುವ ಮಕ್ಕಳಿಗೆ ದಿನನಿತ್ಯ ಹೇಳುತ್ತಿದ್ದರು. ಅದೇ ರೀತಿ ಅಂದು ನನ್ನ ಮಗಳಗೂ ಹೇಳಿದ್ದಾರೆ. ಅವಳು ಇವರ ಮಾತು ಕೇಳದಿದ್ದಾಗ ಮನ ಬಂದಂತೆ ಬೆತ್ತದಿಂದ ಬಾರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ನನ್ನ ಮಗ ಅಂಗವಿಕಲ ಇದ್ದು, ಅವನ ವಿರುದ್ಧ ಶಾಲೆಯಲ್ಲಿ ಮಕ್ಕಳು ತಾರತಮ್ಯ ಮಾಡುತ್ತಿದ್ದಾರೆ. ಹೀಗಾಗಿ, ತಾಳ್ಮೆ ಕಳೆದುಕೊಂಡು ಹೊಡೆದಿದ್ದೇನೆ ಎಂದು ಬಂಧಿತ ಪ್ರಾಂಶುಪಾಲ ಕಿರಣ್ ಕುಮಾರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).