ಕುಕನೂರು ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಭವನಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಶಂಕುಸ್ಥಾಪನೆ ನೇರವೇರಿಸಿದರು. ತಹಸೀಲ್ದಾರ್ ಎಚ್.ಪ್ರಾಣೇಶ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಬಿಇಒ ಸೋಮಶೇಖರಗೌಡ ಪಾಟೀಲ್ ಇತರರಿದ್ದರು. 
ಜಿಲ್ಲೆ

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು

Kopala - Desk - Eraveni

ಕುಕನೂರು: ಕ್ಷೇತ್ರದ ಅಭಿವೃದ್ಧಿಗಾಗಿ ಶಿಕ್ಷಣ, ಆರೋಗ್ಯ, ರಸ್ತೆ ಹಾಗೂ ನೀರಾವರಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ ಹಾಗೂ ಮಂಗಳೂರು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಕೈಗಾರಿಕಾ ತರಬೇತಿ ಕೇಂದ್ರ ಕಟ್ಟಡ ಉದ್ಘಾಟಿಸಿ ಶನಿವಾರ ಮಾತನಾಡಿದರು.

2013-18ರಲ್ಲಿ ಸಚಿವನಾಗಿದ್ದಾಗ ನೆಲಜೇರಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸುವರ್ಣ ಗ್ರಾಮದಡಿ ಅನುದಾನ ನೀಡಲಾಗಿತ್ತು. ನಂತರ ಬಂದ ಜನಪ್ರತಿನಿಧಿ ಭವನ ಪೂರ್ಣಗೊಳಿಸಿಲ್ಲ. ಪ್ರಸ್ತುತ ಭವನಕ್ಕೆ 1.11ಕೋಟಿ ರೂ.ನೀಡಿದ್ದು, ಶೀಘ್ರ ಪೂರ್ಣಗೊಳ್ಳಲಿದೆ. ಕ್ಷೇತ್ರದಲ್ಲಿ 16 ಪ್ರೌಢಶಾಲೆ ನಿರ್ಮಿಸಲಾಗಿದೆ. ಗದಗ-ವಾಡಿ ರೈಲ್ವೆ ಯೋಜನೆ ಜನರಿಗೆ ಅನುಕೂಲವಾಗಿದೆ. ಬಿಜೆಪಿ ಅವರು ನೀರಾವರಿ ಬಗ್ಗೆ ಭಾಷಣ ಮಾಡುತ್ತಾರೆ ವಿನಃ ಜಾರಿಗೆ ತರುವರಲ್ಲ ಎಂದರು.

ಜನರಲ್ಲಿ ಇಂಗ್ಲಿಷ್ ವ್ಯಾಮೂಹ ಹೆಚ್ಚಾಗಿದೆ. ಜಪಾನ್, ಚೀನಾ, ಫ್ರಾನ್ಸ್ ಇತರ ದೇಶಗಳು ಇಂಗ್ಲಿಷ್ ಮಾತನಾಡಿಲ್ಲ. ಆದರೂ ಮುಂದುವರಿದಿವೆ. ಕನ್ನಡ ಭಾಷೆಯಲ್ಲಿ ಅಭ್ಯಾಸ ಮಾಡಿ. ಕ್ಷೇತ್ರಕ್ಕೆ ಕಾರ್ಮಿಕ ವಸತಿ ಶಾಲೆ ವಿಶೇಷವಾಗಿ ಮಂಜೂರಾಗಿದ್ದು, ಸರ್ಕಾರಿ ಇಂಜಿನಿಯರ್ ಕಾಲೇಜಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಅವಳಿ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಶೀಘ್ರವೇ ಕಲ್ಪಿಸಲಾಗುವುದು. ಮಂಗಳೂರಿಗೆ 6 ಕೋಟಿ ರೂ. ಅನುದಾನದಡಿ ಬಸ್ ನಿಲ್ದಾಣ, 8 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುವುದು ಎಂದರು.

ತಹಸೀಲ್ದಾರ್ ಎಚ್.ಪ್ರಾಣೇಶ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಬಿಇಒ ಸೋಮಶೇಖರಗೌಡ ಪಾಟೀಲ್, ಜಿಪಂ ಮಾಜಿ ಸದಸ್ಯರಾದ ಹನುಮಂತಗೌಡ ಪಾಟೀಲ್, ಅಶೋಕ ತೋಟದ, ಕುದರಿಮೋತಿ ಗ್ರಾಪಂ ಅಧ್ಯಕ್ಷೆ ಫರೀದಾ ಬೇಗಂ, ಮಂಗಳೂರು ಗ್ರಾಪಂ ಅಧ್ಯಕ್ಷ ಸಂಕ್ರಪ್ಪ ಚಿನ್ನೂರು, ಕೆಆರ್‌ಐಡಿಎಲ್ ಎಇಇ ಅನಿಲ್ ಪಾಟೀಲ್, ಲೋಕೋಪಯೋಗಿ ಎಇಇ ಮಲ್ಲಿಕಾರ್ಜುನ, ಪ್ರಮುಖರಾದ ಕರಿಬಸಪ್ಪ ನಿಡಗುಂದಿ, ಮಹೇಶ ಹಳ್ಳಿ, ಅಪ್ಪಣ್ಣ ಜೋಷಿ, ಶಿವನಗೌಡ ದಾನರಡ್ಡಿ, ಹನುಮೇಶ ಕಡೆಮನಿ, ದೇವಪ್ಪ ಅರಕೇರಿ ಇತರರಿದ್ದರು.