ವಾಮಂಜೂರಿನ ಅಣಬೆ ಫ್ಯಾಕ್ಟರಿಯ ತೆರೆದ ಜಾಗದಲ್ಲಿ ಕಾಂಪೋಸ್ಟ್ ತಯಾರಿಗೆ ತಯಾರಿ ನಡೆಯುತ್ತಿದೆ. 
ಜಿಲ್ಲೆ

ಅಣಬೆ ಫ್ಯಾಕ್ಟರಿಯಿಂದ ಸಾಂಕ್ರಾಮಿಕ ರೋಗ

ವಿಜಯವಾಣಿ ಸುದ್ದಿಜಾಲ ಗುರುಪುರ

ವಾಮಂಜೂರಿನ ಓಂಕಾರ ನಗರದಲ್ಲಿ ಜನರ ಪ್ರಬಲ ವಿರೋಧವನ್ನೂ ಲೆಕ್ಕಿಸದೆ ದುರ್ವಾಸನೆ ಬೀರುತ್ತ ಕಾರ್ಯಾಚರಿಸುತ್ತಿರುವ ಅಣಬೆ ಉತ್ಪಾದನಾ ಘಟಕ ತೆರೆದ ಪ್ರದೇಶದಲ್ಲಿ ಕಾಂಪೋಸ್ಟ್ ಮಿಶ್ರಣ ತಯಾರಿಸಲಾಗುತ್ತಿದ್ದು, ಪರಿಸರದಲ್ಲಿ ಡೆಂಗೆ ಇತ್ಯಾದಿ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಸದ್ಯ ಈ ಫ್ಯಾಕ್ಟರಿಯ ಚಟುವಟಿಕೆ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ನಿಗಾದಲ್ಲಿದೆ. ಆ.16ರಂದು ಮನಪಾ ಆಯುಕ್ತರು, ಆರೋಗ್ಯಾಧಿಕಾರಿ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಫ್ಯಾಕ್ಟರಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆ ಸಂದರ್ಭ ಅಧಿಕಾರಿಗಳು ಇಲ್ಲಿನ ತೆರೆದ ಜಾಗದಲ್ಲಿ ಭಾರಿ ಪ್ರಮಾಣದಲ್ಲಿ ಕಾಂಪೋಸ್ಟ್ ತಯಾರಿ ಮತ್ತು ತೋಡಿನ ಮೂಲಕ ಫಲ್ಗುಣಿ ನದಿ ಒಡಲಿಗೆ ತ್ಯಾಜ್ಯ ನೀರು ಹರಿಯುತ್ತಿರುವುದನ್ನು ಕಣ್ಣಾರೆ ಕಂಡಿದ್ದರೂ ಕ್ರಮ ತೆಗೆದುಕೊಳ್ಳಲು ಮನಸ್ಸು ಮಾಡದೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಫ್ಯಾಕ್ಟರಿಯ ತೆರೆದ ಪ್ರದೇಶದಲ್ಲಿ ದುರ್ವಾಸನೆ ಮತ್ತು ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣವಾಗಿರುವ ಕಾಂಪೋಸ್ಟ್ ತಯಾರಿ, ತ್ಯಾಜ್ಯ ನೀರು ಹರಿಯುವಿಕೆ, ಹಂದಿ ಸಾಕಣೆಯಿಂದ ಉಂಟಾಗಿರುವ ಪರಿಸರ ಮಾಲಿನ್ಯ ವಿರುದ್ಧ ಮನಪಾ ಆರೋಗ್ಯ ಅಧಿಕಾರಿಗಳು ತಕ್ಷಣ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮತ್ತಷ್ಟು ಜಾಗ ಸಮತಟ್ಟು

ಫ್ಯಾಕ್ಟರಿಯ ಇನ್ನಷ್ಟು ಜಾಗದಲ್ಲಿ ಕಾಂಪೋಸ್ಟ್ ತಯಾರಿಸಲು ಜಾಗ ಸಮತಟ್ಟು ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸ್ಥಳೀಯರು ಫ್ಯಾಕ್ಟರಿಯ ಗೊಬ್ಬರದ ವಿಷಾನಿಲ ಸೋರಿಕೆಯ ದುರ್ವಾಸನೆಯಿಂದ ಉಸಿರಾಟದ ತೊಂದರೆ, ಚರ್ಮರೋಗ ಮತ್ತಿತರ ಕಾಯಿಲೆಗಳ ಜತೆಗೆ ಡೆಂಗೆ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.