ಗಂಗೊಳ್ಳಿ: ಬಂದರಿನ ಹರಾಜು ಪ್ರಾಂಗಣದ ಸಮೀಪ ಭಾರಿ ಬಿರುಕು ಮೀನುಗಾರರಲ್ಲಿ ಆತಂಕ ಕುಂದಾಪುರ: ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಜೆಟ್ಟಿಯಲ್ಲಿ ಕುಸಿತ ಕಂಡು ಬಂದಿದ್ದು, ಹರಾಜು ಪ್ರಾಂಗಣದ ಸಮೀಪ ಭಾರಿ ಬಿರುಕು ಕಾಣಿಸಿಕೊಂಡಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿಯ ಪುನರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು ಮೂರು ವರ್ಷ ಕಳೆಯುತ್ತಿದ್ದು, ಈ ನಡುವೆ ಹೊಸದಾಗಿ ಬಂದರಿನ ದಕ್ಷಿಣ ದಿಕ್ಕಿನಲ್ಲಿ ನಿರ್ಮಾಣಗೊಂಡಿರುವ ಜೆಟ್ಟಿ ಕೂಡ ಕುಸಿತದ ಭೀತಿಯಲ್ಲಿದೆ. ಹೊಸ ಜೆಟ್ಟಿಯ ವಿವಿಧೆಡೆ ಕುಸಿತ ಕಂಡು ಬಂದಿದ್ದು, ಹರಾಜು ಪ್ರಾಂಗಣದ ಸಮೀಪದ ಕಾಣಿಸಿಕೊಂಡಿರುವ ಭಾರಿ ಬಿರುಕುಗಳು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ. ಹೊಸ ಜೆಟ್ಟಿಯ ಅಡಿಯಲ್ಲಿರುವ ಹಳೇ ಜೆಟ್ಟಿಯ ಡಯಾಪ್ರಾಮ್ ವಾಲ್ ಹೊಸ ಜೆಟ್ಟಿಯ ಪಿಲ್ಲರ್ ಮೇಲೆ ಕುಸಿದು ಬೀಳುವ ಸಾಧ್ಯತೆ ಇದ್ದು, ಇದರಿಂದ ಹೊಸ ಜೆಟ್ಟಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಸ್ಥಳೀಯ ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ. ಮೂರು ವರ್ಷದ ಹಿಂದೆಯೂ ಕುಸಿತ; ಮೂರು ವರ್ಷಗಳ ಹಿಂದೆ ಹಳೇ ಜೆಟ್ಟಿಯ ಡಯಪ್ರಮ್ ವಾಲ್ ನಡುವೆ ಕೊಂಡಿಯಾಗಿದ್ದ ರಾಡ್ ತುಂಡಾಗಿ ಹಳೇ ಜೆಟ್ಟಿ ಕುಸಿದಿತ್ತು. ಹೊಸ ಜೆಟ್ಟಿ ಸಮೀಪದಲ್ಲೇ ಹಳೇ ಜೆಟ್ಟಿಯ ಕಾಂಕ್ರೀಟ್ ಸ್ಲ್ಯಾಬ್ ಮತ್ತು ಡಯಾಪ್ರಾಮ್ ವಾಲ್ ಕುಸಿದು ಬಿದ್ದ ಪರಿಣಾಮ ಜೆಟ್ಟಿ ಪುನರ್ ನಿರ್ಮಾಣ ಕಾರ್ಯಕ್ಕೆ ಅಳವಡಿಸಲಾಗಿದ್ದ ಪಿಲ್ಲರ್ ಹಾಗೂ ಇನ್ನಿತರ ಕಾಂಕ್ರೀಟ್ ಕಾಮಗಾರಿಗೆ ಹಾನಿಯಾಗಿತ್ತು. ಇದೀಗ ಮುಂದುವರಿದ ಭಾಗವಾಗಿ ಹಳೇ ಜೆಟ್ಟಿಯ ಡಯಾಪ್ರಾಮ್ ವಾಲ್ ಹಾಗೂ ಜೆಟ್ಟಿಯ ಸ್ಲ್ಯಾಬ್ ಹೊಸ ಜೆಟ್ಟಿಯ ಮೇಲೆ ಕುಸಿದು ಬೀಳುವ ಆತಂಕ ಎದುರಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಇದು ಸಾಕ್ಷಿ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೇ ಜೆಟ್ಟಿಯ ಡಯಾಪ್ರಾಮ್ ವಾಲ್ ಕುಸಿತಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ. ಹೊಸ ಜೆಟ್ಟಿಯ ಅಡಿಯಲ್ಲಿರುವ ಹಳೇ ಜೆಟ್ಟಿಯ ಡಯಾಪ್ರಮ್ ವಾಲ್ ಕುಸಿದು ಬೀಳುವ ಸಾಧ್ಯತೆ ಇದ್ದು, ಇದರಿಂದ ಹೊಸ ಜೆಟ್ಟಿಗೆ ಅಪಾಯವಾಗುವ ಸಾಧ್ಯತೆ ಇದೆ. ಸರ್ಕಾರ ಮೀನುಗಾರರ ಜೀವ-ಜೀವನದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು. ರಾಮಪ್ಪ ಖಾರ್ವಿ, ಸ್ಥಳೀಯ ಮೀನುಗಾರ, ಗಂಗೊಳ್ಳಿ