ಕಲಬುರಗಿ: ತಾವು ಸಾಯುವುದಲ್ಲದೆ ಅದಕ್ಕೂ ಮೊದಲು ಬೇರೆಯವರನ್ನೂ ಸಾಯಿಸಿ, ತಮ್ಮೊಂದಿಗೆ ಇತರರ ಜೀವವನ್ನೂ ಕೊನೆಗಾಣಿಸುವಂಥ ಹೇಯಕೃತ್ಯಗಳು ಸಮಾಜದಲ್ಲಿ ಹೆಚ್ಚಾಗುತ್ತಿದೆ. ಇದೀಗ ಅಂಥದ್ದೇ ಒಂದು ಕೊಲೆ ಹಾಗೂ ಆತ್ಮಹತ್ಯೆ ವರದಿಯಾಗಿದೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಉಪ್ಪಾರವಾಡಿಯಲ್ಲಿ ಈ ಘಟನೆ ನಡೆದಿದೆ. 26 ವರ್ಷದ ಯುವಕ ತನ್ನ ನಾಲ್ಕು ವರ್ಷದ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೆ, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರ್ಜುನ್ ಎಂಬಾತನೇ ಮಗಳನ್ನು ಹತ್ಯೆ ಮಾಡಿದ ತಂದೆ. ಪೂನಮ್ ತಂದೆಯಿಂದ ಹತ್ಯೆಗೀಡಾದ ದುರ್ದೈವಿ.
ಅರ್ಜುನನ ಹೆಂಡತಿ ತವರಿನಲ್ಲಿದ್ದು ಮಕ್ಕಳೊಂದಿಗೆ ಉಪ್ಪರವಾಡಿಯಲ್ಲಿ ವಾಸಿಸುತ್ತಿದ್ದ. ನಿನ್ನೆ ರಾತ್ರಿ ಮಗಳನ್ನು ಹೊಲಕ್ಕೆ ಕರೆದೊಯ್ದು ಕೊಂದು ಹಾಕಿ ಬಳಿಕ ನೇಣು ಬಿಗಿದುಕೊಂಡಿದ್ದಾನೆ. ಇದಕ್ಕೂ ಮೊದಲು ಆತ ಮದ್ಯಪಾನ ಮಾಡಿದ್ದ ಎನ್ನಲಾಗುತ್ತಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.