ಜಿಲ್ಲೆ

ರಾ.ಹೆ. ಕಾಮಗಾರಿ ತ್ವರಿತ ಪೂರ್ಣ

Avinash R

ವಿಜಯವಾಣಿ ಸುದಿಜಾಲ ಬೆಳ್ತಂಗಡಿ

ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ಆಗಿರುವ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಈ ರಸ್ತೆಯ ಮುಂದಿನ ಕಾಮಗಾರಿಯನ್ನು ಗುತ್ತಿಗೆದಾರ ಮೊಗೇರೋಡಿ ಕನ್ಷ್ರಕ್ಷನ್ ಅವರು ಆ.12ರಿಂದ ಮಾಡಲಿದ್ದಾರೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.

ಭಾನುವಾರ ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆದ್ದಾರಿ ಅಭಿವೃದ್ಧಿಯಲ್ಲಿ ದೊಡ್ಡ ಸಾಧನೆ ಮಾಡಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವಧಿಯಲ್ಲಿ ಮಂಜೂರಾದ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ನನ್ನ ಆದ್ಯತೆಯಾಗಿದೆ. ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಕಾಮಗಾರಿಗೆ ಹಣ ಬಿಡುಗಡೆ ಆಗಿದೆ. ಗುತ್ತಿಗೆದಾರ ಡಿ.ಪಿ ಜೈನ್, ಹೆದ್ದಾರಿ ಮುಖ್ಯ ಇಂಜಿನಿಯರ್, ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಮುಂದಿನ ಹೆದ್ದಾರಿ ಕಾಮಗಾರಿಯನ್ನು ಮೊಗೇರೋಡಿ ಕನ್ಷ್ರಕ್ಷನ್ ಕಂಪನಿ ಮಾಡುವುದಾಗಿ ನಿರ್ಧರಿಸಲಾಗಿದೆ. ಪ್ರಥಮ ಹಂತದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಸ್ತೆಯ ಹೊಂಡ-ಗುಂಡಿ ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ವಿನಂತಿಸಿ ಡಿಪಿಆರ್ ತಯಾರಿಸಿ ರೂ.700 ಕೋಟಿ ಅನುದಾನ ಮಂಜೂರಾಯಿತು. ಗುತ್ತಿಗೆ ನಾಗಪುರದ ಡಿ.ಪಿ ಜೈನ್ ವಹಿಸಿಕೊಂಡು ಕಳೆದ ವರ್ಷ ಕೆಲಸ ಆರಂಭಿಸಿದರು. ಆದರೆ ದ.ಕ ಜಿಲ್ಲೆಯಲ್ಲಿ ಆರೇಳು ತಿಂಗಳು ಮಳೆಯಿಂದಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಸಂಸದ ಬ್ರಿಜೇಶ್ ಚೌಟ ಅವರ ಗಮನಕ್ಕೆ ತಂದಾಗ ಜನರ ಸಮಸ್ಯೆ ತಿಳಿದು ಕೇಂದ್ರ ಸಚಿವ ನಿತಿನ್ ಗಡ್ಕರಿ, ಹೆದ್ದಾರಿ ಇಲಾಖೆ ಅಧಿಕಾರಿಗಳಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಅನುಭವ ಇರುವ ಗುತ್ತಿಗೆದಾರ ವ್ಯವಸ್ಥೆ ಮಾಡಿದ್ದಾರೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಉಪಸ್ಥಿತರಿದ್ದರು.