ಕೂಡ್ಲಿಗಿಯಲ್ಲಿ ಜಿಪಂ ಅನುದಾನದಡಿ ಖರೀದಿಸಿದ್ದ ಸೋಂಕು ನಿವಾರಕ ದ್ರಾವಣಗಳನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ರೇಷ್ಮೆ ಬೆಳೆಗಾರರಿಗೆ ವಿತರಿಸಿದರು. ರೇಷ್ಮೆ ಇಲಾಖೆ ಉಪ ನಿರ್ದೇಶಕ ವಿ.ಸುಧೀರ್, ಸಹಾಯಕ ನಿರ್ದೇಶಕ ಬಸಲಿಂಗಪ್ಪ ಬಿ.ಕುಂಬಾರ್, ವಿಸ್ತರಣಾಧಿಕಾರಿ ಅಲ್ಲಾಭಕ್ಷಿ, ಸಹಾಯಕ ನರೇಶ್ ಇತರರಿದ್ದರು. 
ಜಿಲ್ಲೆ

ರೇಷ್ಮೆ ಬೆಳೆದು ಯಶ ಕಂಡ ರೈತರು

ಕೂಡ್ಲಿಗಿ: ಕ್ಷೇತ್ರದಲ್ಲಿ ರೇಷ್ಮೆ ಬೆಳೆಗಾರರು ಹೆಚ್ಚಾಗಿದ್ದು, ರೇಷ್ಮೆ ಬೆಳೆ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಜಿಪಂ ಅನುದಾನದಡಿ ಖರೀದಿಸಿದ್ದ ಸೋಂಕು ನಿವಾರಕ ದ್ರಾವಣಗಳನ್ನು ರೇಷ್ಮೆ ಬೆಳೆಗಾರರಿಗೆ ವಿತರಿಸಿ ಮಂಗಳವಾರ ಮಾತನಾಡಿದರು. ಕ್ಷೇತ್ರದಲ್ಲಿ 1,613 ಬೆಳೆಗಾರರು 3,126 ಎಕರೆಯಲ್ಲಿ ಹಿಪ್ಪುನೇರೆಳೆ ಬೆಳೆಯುತ್ತಿದ್ದಾರೆ. ಕೃಷಿಯೇ ಮೂಲ ಕಸುಬು ಆಗಿರುವುದರಿಂದ ತಾಲೂಕಿನ ಅನೇಕರು ಕಳೆದ 30 ವರ್ಷಗಳಿಂದ ರೇಷ್ಮೆ ಬೆಳೆದು ಯಶಸ್ಸು ಕಂಡಿದ್ದಾರೆ ಎಂದರು.

ಕ್ಷೇತ್ರದ ನಿಂಬಳಗೆರೆ, ಜಂಗಮಸೋವೇನಹಳ್ಳಿ, ಕೋಣನಹಳ್ಳಿ, ನಾಗರಕಟ್ಟೆ ಸೇರಿದಂತೆ 160 ಕ್ಕೂ ಹೆಚ್ಚು ಗ್ರಾಮಗಳಲ್ಲಿ ರೇಷ್ಮೆ ಬೆಳೆದು ಉತ್ತಮ ಆದಾಯ ಕಂಡು ಕೊಂಡಿದ್ದಾರೆ. ಆದ್ದರಿಂದ ಸಂಬಂಧಿಸಿದ ಸಚಿವರು ಹಾಗೂ ಮುಖ್ಯಮಂತ್ರಿ ಜತೆ ಚರ್ಚಿಸಿ ರೈತರಿಗೆ ಹೆಚ್ಚಿನ ಅನುದಾನ, ಪೂರಕವಾದ ಔಷಧ ಒದಗಿಸುವಂತೆ ಮನವಿ ಮಾಡಲಾಗುವುದು. ಇಲಾಖೆ ನೀಡಿದ ಔಷಧಗಳನ್ನು ಸಮರ್ಪಕವಾಗಿ ಬಳಸಿ ಉತ್ತಮ ಬೆಳೆ ಪಡೆಯುವಂತೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚಿಸಿದರು.

ರೇಷ್ಮೆ ಇಲಾಖೆ ಉಪ ನಿರ್ದೇಶಕ ವಿ.ಸುಧೀರ್ ಮಾತನಾಡಿ, ತಾಲೂಕಿನಲ್ಲಿ ಅನೇಕ ರೇಷ್ಮೆ ಬೆಳೆಗಾರರು ಉತ್ತಮ ಫಸಲು ಪಡೆದು ಯಶಸ್ವಿಯಾಗಿದ್ದು, ಯುವಕರು ಸಾಂಪ್ರದಾಯಿಕ ಕೃಷಿ ಬಿಟ್ಟು ರೇಷ್ಮೆ ಬೆಳೆದು ಅದಾಯ ದ್ವಿಗುಣ ಮಾಡಿದ್ದಾರೆ. ರೇಷ್ಮೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಹಾಗಾಗಿ ಪ್ರಸಕ್ತ ಸಾಲಿನಲ್ಲಿ 95 ರೇಷ್ಮೆ ಹುಳು ಸಾಕಣೆಗೆ ಸಹಾಯಧನ ನೀಡಲಾಗಿದೆ. ಕಡಿಮೆ ವೆಚ್ಚದ 86 ಶೆಡ್‌ಗಳಿಗೆ ಸಹಾಯಧನವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದರು.