ಸಂಡೂರು: ದೇಶದ ಆರ್ಥಿಕ, ಏಕತೆ ಮತ್ತು ಸಮಗ್ರತೆಗೆ ಆಳುವ ವರ್ಗದಿಂದ ಅಪಾಯ ಬಂದೊದಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ ಹೇಳಿದರು.
ಪಟ್ಟಣದ ವಿಜಯ ಸರ್ಕಲ್‌ನಲ್ಲಿ ಸಿಐಟಿಯು, ಕೆಪಿಆರ್‌ಎಸ್, ಡಿವೈಎಫ್‌ಐ, ಕಟ್ಟಡ ಕಾರ್ಮಿಕರ ಅಹೋರಾತ್ರಿ ಧರಣಿ ಉದ್ದೇಶಿಸಿ ಸೋಮವಾರ ಮಾತನಾಡಿದರು.
ರೈತರ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಒಂದೆಡೆ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಾ ಸಾಗಿದ್ದರೂ ಮತ್ತೊಂದೆಡೆ ರೈತರ ಭೂಮಿಯನ್ನು ಕಿತ್ತುಕೊಂಡು ರೈತರ ಬದಲಿಗೆ ಕಾರ್ಪೊರೇಟ್ ಕೃಷಿಯನ್ನು ತರಲು ಹೊರಟಿದೆ. ಕೃಷಿತಜ್ಞ ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಉತ್ಪಾದನಾ ವೆಚ್ಚಕ್ಕೆ ಶೇ.50 ಲಾಭಾಂಶ ಸೇರಿದಂತೆ ಬೆಂಬಲ ಬೆಲೆಯನ್ನು ನಿಗದಿಪಡಿಸುವ ಬದಲು ರೈತರು ತಮ್ಮ ಸ್ವಾಭಿಮಾನದ ಸಂಕೇತವಾಗಿರುವ ಭೂಮಿಯನ್ನು ಮಾರಾಟ ಮಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಯೋಜನೆಗಳ ವಿಳಂಬದಿಂದಲೇ ರಾಜ್ಯದ ಬೊಕ್ಕಸಕ್ಕೆ ಅತ್ಯಧಿಕ ಹೊರೆ, ಬೊಕ್ಕಸ ನಷ್ಟಕ್ಕೆ ಕಾಂಗ್ರೆಸ್ ಧೋರಣೆಗಳೇ ಕಾರಣ: ಸಿಎಂ
ರಸಗೊಬ್ಬರ ಸಬ್ಸಿಡಿಯನ್ನು ರದ್ದುಪಡಿಸಲಾಗಿದೆ. ಶೇ.60 ಭೂರಹಿತರು ಕೃಷಿ ಕೂಲಿಕಾರರಾಗಿ ಕನಿಷ್ಟ ಕೂಲಿಯ ಖಾತ್ರಿಯಿಲ್ಲದೆ ಸಾಮಾಜಿಕ ರಕ್ಷಣೆಗೂ ಪರದಾಡುತ್ತಿದ್ದಾರೆ. ದೇಶದ ಮುನ್ನಡೆಗೆ ಕಾರಣವಾಗಿರುವ ರಾಷ್ಟ್ರೀಯ ಸಂಪತ್ತನ್ನು ಸೃಷ್ಟಿಸುವ ಶೇ.19ಕೋಟಿ ಜನ ಶ್ರಮಿಕರು, ಕಾರ್ಮಿಕರು ಗುತ್ತಿಗೆ, ಹೊರಗುತ್ತಿಗೆ, ಅಪ್ರೆಂಟಿಸ್, ನಿಗದಿತ ಅವಧಿ, ಸೀಸನಲ್ ವರ್ಕ, ದಿನಗೂಲಿ, ಗೌರವಧನದ ಹೆಸರಿನಲ್ಲಿ ದುಡಿಯುತ್ತಿದ್ದಾರೆ ಎಂದರು. ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ಘೋಷಣೆ ಕೂಗಿದರು.