More

    ಯೋಜನೆಗಳ ವಿಳಂಬದಿಂದಲೇ ರಾಜ್ಯದ ಬೊಕ್ಕಸಕ್ಕೆ ಅತ್ಯಧಿಕ ಹೊರೆ, ಬೊಕ್ಕಸ ನಷ್ಟಕ್ಕೆ ಕಾಂಗ್ರೆಸ್ ಧೋರಣೆಗಳೇ ಕಾರಣ: ಸಿಎಂ

    ವಿಜಯವಾಣಿ ಸುದ್ದಿಜಾಲ ಗದಗ,

    ಕಾಲಮಿತಿಯಲ್ಲಿ ಕಾಮಗಾರಿಗಳು ಅನುಷ್ಠಾನಗೊಳ್ಳದ ಕಾರಣ ವೆಚ್ಚವು ಅಧಿಕಗೊಳ್ಳುತ್ತ ಸಾಗಿ, ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸುತ್ತದೆ. ಇಂತಹ ಪ್ರಕ್ರಿಯೆಗೆ ಕಾಂಗ್ರೆಸ್ ಪಕ್ಷವೇ ಮೂಲ ಕಾರಣ. ವಿಳಂಬ ರಹಿತವಾದ ಆಡಳಿತ ನಡೆಸಿ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ ಆರ್ಥಿಕವಾಗಿ ರಾಜ್ಯವನ್ನು ಸದೃಢಗೊಳಿಸುವುದು  ನಮ್ಮ ಸರ್ಕಾರದ ಧ್ಯೇಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 

    ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ಸೋಮವಾರ ಜರುಗಿದ 141 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ ಮತ್ತು ಫಲಾನುಭವಿಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಜತೆಗೆ ಬಡತನ ನಿರ್ಮೂಲನೆಯಲ್ಲಿ ಕಾಂಗ್ರೆಸ್ ಎಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

    ಈ ದೇಶದಲ್ಲಿ ಘೋಷಣೆಗಳಿಗೆ, ಭರವಸೆಗಳಿಗೆ ಕೊರತೆಯಿಲ್ಲ. ಗರಿಬೀ ಹಠಾವೋ ಬದಲಾಗಿ, ಗರಿಬೀಕೋ ಹಠಾವೋ ಆಂದೋಲನವನ್ನು ಕಾಂಗ್ರೆಸ್ ನಡೆಸುತ್ತಿದೆ. ಕಳೆದ 50 ವರ್ಷಗಳ ಹಿಂದೆಯೇ ಗರಿಬೀ ಹಠಾವೋ ಘೋಷಣೆ ಮಾಡಿದ್ದ ಕಾಂಗ್ರೆಸ್ 60 ವರ್ಷಗಳಿಗಿಂತ ಹೆಚ್ಚು ಆಡಳಿತ ನಡೆಸಿದರೂ ಗರಿಬೀ(ಬಡತನ) ನಿರ್ಮೂಲನೆ ಆಗಲೇ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

    ದೇಶದಲ್ಲಿ 12 ಕೋಟಿ ಮನೆಗೆ ಕುಡಿಯು ನೀರು ಸೌಲಭ್ಯ ಒದಗಿಸಲಾಗಿದೆ‌. ಕಳೆದ ಮೂರು ವರ್ಷದಲ್ಲಿ 5 ಕೋಟಿ ಮನೆಗೆ ನೀರು ಪೂರೈಸಲಾಗಿದೆ. ರಾಜ್ಯದಲ್ಲಿ ಕಳೆದ 72 ವರ್ಷದಲ್ಲಿ 25 ಲಕ್ಷ ಮನೆಗೆ ನೀರು ಸಂಪರ್ಕ ಕಲ್ಪಿಸಲಾಗಿತ್ತು. 

    ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ 40 ಲಕ್ಷ ಮನೆಗೆ ನೀರು ಸಂಪರ್ಕ ಕಲ್ಪಿಸಿದೆ. ಇದು ಡಬಲ್ ಇಂಜಿಬ್ ಸರ್ಕಾರದ ತಾಕತ್ತು ಎಂದರು. 

    ಸಿದ್ದರಾಮಯ್ಯ ವಿರುದ್ಧ ಗುಡುಗು: ಸಾಮಾಜಿಕ ನ್ಯಾಯ ಎಂದು ಭಾಷಣ ಮಾಡುವ ರಾಜಕಾರಣಿಗಳಿಂದ  ಸಾಮಾಜಿಕ ನ್ಯಾಯ ದೊರೆತಿದೆಯೇ ಎಂದು ಸಿದ್ದರಾಮಯ್ಯ ವಿರುದ್ದ ಸಿಎಂ ಗುಡುಗಿದರು. ಎಲ್ಲ ನನ್ನಿಂದಲೆ, ನನ್ನಿಂದಲೇ ಸಾಧ್ಯ, ಎಲ್ಲವೂ ಸಂವಿಧಾನ ಬದ್ಧವಾಗಿ ಎಂದು ಹೇಳುತ್ತ ಜನರಿಗೆ ಮೋಸ ಮಾಡುವುದು ಅವರಿಗೆ ಗೊತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ತಿವಿದರು. ಬಿಜೆಪಿ ಸರ್ಕಾರ ಭಾಷಣ ಮಾಡದೇ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದೆ ಎಂದರು.

    ಸಚಿವ ಸಿ.ಸಿ. ಪಾಟೀಲ, ಬಿ.ಎ. ಬಸವರಾಜ, ಕಳಕಪ್ಪ ಬಂಡಿ ಇತರರು ಇದ್ದರು

    ಬಾಕ್ಸ್: 

    ಕುಡಿಯುವ ನೀರು ಮನುಷ್ಯನ ಅತ್ಯಂತ ಅವಶ್ಯಕ. ವ್ಯವಸ್ಥೆಯಲ್ಲಿ 75 ವರ್ಷ ಕಳೆದರೂ ಎಲ್ಲರಿಗೂ ಕುಡಿಯುವ ನೀರು ಪೂರೈಸಲು ಸಾಧ್ಯವಾಗಿಲ್ಲ ಎಂದರೆ ತಲೆ ಭಾಗಿಸಬೇಕಿದೆ. ಅದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ಸಿಎಂ ಟೀಕಿಸಿದರು. 

    ಲಕ್ಕುಂಡಿ, ಹಂಪಿ ಸರ್ಕ್ಯೂಟ್ ನ ಭಾಗವಾಗಲಿದೆ- ಸಿಎಂ ಬಸವರಾಜ ಬೊಮ್ಮಾಯಿ 

    ಹಂಪಿ ಸರ್ಕ್ಯೂಟ್ ನಲ್ಲಿ  ಲಕ್ಕುಂಡಿಯನ್ನು ಸೇರಿಸಲು ಈಗಾಗಲೇ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಲಕ್ಕುಂಡಿ ಕ್ಷೇತ್ರವು ಹಂಪಿ ಸರ್ಕೀಟ್ ನ ಭಾಗವಾಗಲಿದೆ ಎಂದ ಸಿಎಂ, ರೋಣ ಕ್ಷೇತ್ರದಲ್ಲಿ ಕೈಗಾರಿಕಾ ಅಭಿವೃದ್ದಿಯಾಗಿಲ್ಲ. ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ ಎಂಬ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಸರ್ಕಾರ ಇಡೀ ರಾಜ್ಯದ ಅಭಿವೃದ್ಧಿಗೆ ಬದ್ದವಾಗಿದೆ. ರೋಣದ ಅಭಿವೃದ್ದಿಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕೋವಿಡ್ ನಿಂದಾಗಿ ಮೃತಪಟ್ಟ ಗ್ರಾಮ ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರ ಕುಟುಂಬದವರಿಗೆ ಇನ್ನೂ ಪರಿಹಾರ ನೀಡಲಾಗಿಲ್ಲ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ವಿವರ ತರಿಸಿಕೊಂಡು, ಕೋವಿಡ್ ನಿಂದಲೇ ಮೃತಪಟ್ಟಿರುವ ಬಗ್ಗೆ ದಾಖಲೆ ಪಡೆದು ಪರಿಹಾರವನ್ನು ಖಂಡಿತ ಒದಗಿಸಲಾಗುವುದು ಎಂದರು.

    ಕೋಟ್:

    ನನ್ನಷ್ಟು ಎಷ್ಟೇ ಟೀಕೆ ಮಾಡಿದರೂ ಟೀಕೆಗಳನ್ನು ಮೆಟ್ಟಿಲು ಮಾಡಿ ಯಶಸ್ಸು ಕಾಣುತ್ತೇನೆ. ಟೀಕೆಗೆ ಅದೇ ನನ್ನ ಉತ್ತರ.

    – ಸಿಎಂ ಬಸವರಾಜ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts