ಜಿಲ್ಲೆ

ಜಲಾಶಯದಲ್ಲಿ ಹರಿದುಹೋದ ರೈತ; 70 ಕಿಮೀ ದೂರದಲ್ಲಿ ಶವ ಪತ್ತೆ

ಬೀದರ್: ರೈತರೊಬ್ಬರು ತಮ್ಮ ಕೃಷಿ ಭೂಮಿಯಿಂದ ಮನೆಗೆ ಹೋಗುವಾಗ ಜಲಾಶಯದಲ್ಲಿ ಬಿದ್ದು, ನೀರಿನಲ್ಲಿ ಹರಿದು ಹೋಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಬೀದರ್​ ಜಿಲ್ಲೆ ಭಾಲ್ಕಿ ತಾಲೂಕಿನ ಸಾಯಗಾಂವ ಗ್ರಾಮದ ನಿವಾಸಿ ವಿನಾಯಕ ಪವಾರ(55) ಮೃತ ದುರ್ದೈವಿ.

ತಮ್ಮ ಜಮೀನಿನಿಂದ ಮನೆಗೆ ಹೋಗುವ ದಾರಿಯಲ್ಲಿರುವ ಸಾಯಗಾಂವ ಬಳಿಯ ಮಾಂಜ್ರಾ ಜಲಾಶಯದಲ್ಲಿ ಬಿದ್ದಿರುವ ವಿನಾಯಕ ಪವಾರ ಅವರ ಶವವು ಕಮಲನಗರ ತಾಲೂಕಿನ ಸಂಗಮ ಬಳಿ ಜಲಾಶಯದ ನೀರಿನಲ್ಲಿ ಸಿಕ್ಕಿದೆ. ರೈತನ ದೇಹವು ಸುಮಾರು 70 ಕಿಮೀವರೆಗೆ ನೀರಿನಲ್ಲಿ ಹರಿದುಕೊಂಡು ಹೋಗಿರುವುದು ತಿಳಿದುಬಂದಿದೆ.

ಕಮಲನಗರ ತಹಸೀಲ್ದಾರ್​ ಕೀರ್ತಿ ಮತ್ತು ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲಾಶಯ ದಾಟುವಾಗ ಕಾಲುಜಾರಿ ನೀರಿಗೆ ಬಿದ್ದಿರಬಹುದು ಎಂದು ಭಾವಿಸಲಾಗಿದೆ. ಮೃತ ರೈತನ ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ.