ಹಾವೇರಿ: ಬ್ಯಾಂಕ್ನವರ ಧೋರಣೆಯಿಂದ ರೈತನೊಬ್ಬ ಪ್ರಾಣ ಕಳೆದುಕೊಂಡಿದ್ದು, ಸಂಬಂಧಿಕರು ಬ್ಯಾಂಕ್ ಮುಂದೆ ಶವ ಇರಿಸಿ ಪ್ರತಿಭಟನೆ ನಡೆಸಲು ಮುಂದಾದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸಬೇಕಾದ ಪರಿಸ್ಥಿತಿಯೂ ಉಂಟಾಗಿತ್ತು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದರ್ಶನ್ ಮುದ್ದಪ್ಪನವರ (30) ಪ್ರಾಣ ಕಳೆದುಕೊಂಡ ರೈತ. ಒನ್ ಟೈಮ್ ಸೆಟ್ಲ್ಮೆಂಟ್ ಮಾಡದ ಬ್ಯಾಂಕ್ ಧೋರಣೆಯಿಂದ ಸಾಲ ಹೆಚ್ಚಾದ ಪರಿಣಾಮವಾಗಿ ಈ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ತಂದೆಯ ಹೆಸರಲ್ಲಿ 4 ಲಕ್ಷ ರೂ. ಸಾಲ ಹಾಗೂ ಕೈಗಡವಾಗಿ 2 ಲಕ್ಷ ರೂ. ಸಾಲ ಹೊಂದಿದ್ದ. ಆದರೆ ಬ್ಯಾಂಕ್ನವರು ಒನ್ ಟೈಮ್ ಸೆಟ್ಲ್ಮೆಂಟ್ ಮಾಡದ್ದಕ್ಕೆ ಬಡ್ಡಿ ಹೆಚ್ಚಾಗಿದೆ. ರೈತರಿಗೆ ಹೇಳದ ಒಟಿಎಸ್ ಮೀಟಿಂಗ್ ಮಾಡಿದ್ದು, ಮತ್ತಷ್ಟು ಸಾಲ ಹೆಚ್ಚಾಗಲು ಕಾರಣ ಎಂದು ಆರೋಪಿಸಿರುವ ಸಂಬಂಧಿಕರು, ಯೂನಿಯನ್ ಬ್ಯಾಂಕ್ ಶಾಖೆ ಎದುರು ಶವ ಇರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಆದರೆ ಶವದೊಂದಿಗೆ ಬ್ಯಾಂಕ್ನತ್ತ ತೆರಳಲು ಸಂಬಂಧಿಕರು ಮತ್ತು ರೈತ ಮುಖಂಡರಿಗೆ ಪೊಲೀಸರು ಬಿಡದ್ದರಿಂದ ಪೊಲೀಸರು ಮತ್ತು ಅವರ ಮಧ್ಯ ನೂಕಾಟ ಉಂಟಾಗಿತ್ತು. ಇದರಿಂದ ಅಲ್ಲಿ ಒಂದಷ್ಟು ಕಾಲ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಪೊಲೀಸರು ಅವರನ್ನೆಲ್ಲ ವ್ಯಾನ್ಗೆ ತುಂಬಿಸಿಕೊಂಡು ಹೋಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಎಸ್ಪಿ, ಎಎಸ್ಪಿ, ಇಬ್ಬರು ಡಿವೈಎಸ್ಪಿ ಮತ್ತು ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತೆ ದೃಷ್ಟಿಯಿಂದ ಹಲಗೇರಿ ಠಾಣೆ ವ್ಯಾಪ್ತಿಯ ಈ ಪ್ರದೇಶದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿದೆ.