ಕೆಯ್ಯೂರು ಗ್ರಾಮದ ದೇವಿನಗರ ಜನತಾ ಕಾಲನಿಯಲ್ಲಿರುವ ಬಳ್ಳು ಕೊರಗ ಎಂಬುವರ ಕುಟುಂಬ ವಾಸ್ತವ್ಯವಿರುವ ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಯನ್ನು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ., ಪಂಚಾಯಿತಿ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಆಡಳಿತ ಅಧಿಕಾರಿ ಸ್ವಾತಿ ಅವರನ್ನೊಳಗೊಂಡ ತಂಡ ಪರಿಶೀಲನೆ ನಡೆಸಿತು 
ಜಿಲ್ಲೆ

ಅಪಾಯಕಾರಿ ಮನೆಯಿಂದ ಕುಟುಂಬ ಸ್ಥಳಾಂತರ

ಇಂದಿರಾ ಎನ್ ಕೆ

ಪುತ್ತೂರು ಗ್ರಾಮಾಂತರ: ಕೆಯ್ಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗುರುವಾರ ಅಪಾಯದ ಸ್ಥಿತಿಯ ಮನೆಯಲ್ಲಿ ವಾಸ್ತವ್ಯವಿರುವ ಕುಟುಂಬವೊಂದನ್ನು ಕೆಯ್ಯೂರಿನ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಿದ್ದಾರೆ.

ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಪಂಚಾಯಿತಿ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಆಡಳಿತ ಅಧಿಕಾರಿ ಸ್ವಾತಿ, ಸಹಾಯಕ ನಾರಾಯಣ್ ಅವರನ್ನೊಳಗೊಂಡ ತಂಡ ಮಳೆ ಅನಾಹುತ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಹಲವು ಕಡೆಗಳಲ್ಲಿ ಸಂಚರಿಸಿ ಮಾಹಿತಿ ಪಡೆದುಕೊಂಡಿತು.

ಕೆಯ್ಯೂರು ಗ್ರಾಮದ ದೇವಿನಗರ ಜನತಾ ಕಾಲನಿಯಲ್ಲಿರುವ ಬಳ್ಳು ಕೊರಗ ಎಂಬುವರ ಕುಟುಂಬದ ವಾಸ್ತವ್ಯದ ಮನೆ ಸೋರುತ್ತಿದ್ದು, ಗೋಡೆಗಳು ಒದ್ದೆಯಾಗಿರುವುದು, ಬಳ್ಳು ಕೊರಗ ಅವರು ನಡೆಯಲಾಗದ ಪರಿಸ್ಥಿತಿಯಲ್ಲಿ ಇರುವುದು ಪರಿಶೀಲನೆಯ ವೇಳೆ ಕಂಡು ಬಂದಿತ್ತು. ಮನೆ ಕುಸಿದು ಬೀಳುವ ಸ್ಥಿತಿಯಲ್ಲಿರುವುದರಿಂದ 5 ಮಂದಿಯನ್ನೊಳಗೊಂಡ ಬಳ್ಳು ಕೊರಗ ಅವರ ಕುಟುಂಬವನ್ನು ತಾತ್ಕಾಲಿಕವಾಗಿ ಕೆಯ್ಯೂರಿನ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಿದರು.

ಅಪಾಯಕಾರಿ ಮರ ತೆರವಿಗೆ ಮನವಿ

ಇಳಂತಾಜೆ ರಸ್ತೆಯಲ್ಲಿ ಶ್ರೀಧರ ಪೂಜಾರಿ ಎಂಬುವರ ಮನೆಯ ಬಳಿ ರಸ್ತೆ ಬದಿಯ ಮರವೊಂದು ಉರುಳಿ ಮತ್ತೊಂದು ಮರದ ಆಧಾರದಲ್ಲಿ ನಿಂತಿರುವುದು ಮುಂಜಾಗ್ರತಾ ಕಾರ್ಯಾಚರಣೆ ವೇಳೆ ಕಂಡು ಬಂತು. ಈ ಮರವನ್ನು ಕೂಡಲೇ ತೆರವುಗೊಳಿಸುವಂತೆ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅರಣ್ಯ ಇಲಾಖೆಗೆ ಕರೆ ಮಾಡಿ ಮನವಿ ಮಾಡಿಕೊಂಡರು. ಕಣಿಯಾರು ಎಂಬಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿ ಕೆರೆಯೊಂದಿದೆ ಎಂಬ ಕುರಿತು ಮಾಹಿತಿ ಪಡೆದ ತಂಡ ಅಲ್ಲಿಗೆ ತೆರಳಿ ಪರಿಶೀಲನೆ ನಡೆದಿದ್ದು, ಕೆರೆ ಅಪಾಯಕಾರಿ ಸ್ಥಿತಿಯಲ್ಲಿರುವುದರಿಂದ ಅದರ ಸುತ್ತಲೂ ಬೇಲಿ ನಿರ್ಮಿಸುವಂತೆ ಜಾಗದ ಮಾಲೀಕರಿಗೆ ಸೂಚನೆ ನೀಡಲಾಯಿತು.