ಜಿಲ್ಲೆ

ತಪ್ಪು ಜಾತಿ ವರದಿ ಪಿಎಸ್ಐ ಅಮಾನತು

Uttara Kannada - Subash Hegde

ಕಾರವಾರ:ಜಾತಿ ಪರಿಶೀಲನಾ ವರದಿ ನೀಡುವಲ್ಲಿ ನಿಷ್ಕಾಳಜಿ ತೋರಿದ ಆರೋಪದ ಮೇಲೆ ಮಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪಿಎಸ್‌ಐ ಡಿ.ಎನ್.ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಐಜಿ ಅಜಯ್ ಹಿಲೋರಿ ಅವರು ಸೋಮವಾರ ಈ ಆದೇಶ ಮಾಡಿದ್ದಾರೆ.

ಭಟ್ಕಳದ ಸಂತೋಷ ನಾಗಯ್ಯ ಗೊಂಡ, ಮಲ್ಲಿಕಾ ಮಂಗಳ ಗೊಂಡ, ಗಣಪತಿ ಸನ್ನು ಗೊಂಡ, ತೇಜಸ್ ಕುಮಾರ್ ಸುಕ್ರ ಗೊಂಡ, ಮಮತಾ ಮಂಜು ಗೊಂಡ ಅವರು ಪರಿಶಿಷ್ಟ ಜಾತಿಯ `ಗೊಂಡ್' ಜಾತಿ ಪ್ರಮಾಣಪತ್ರ ಪಡೆದಿದ್ದು, ಅದರ ಸತ್ಯಾಸತ್ಯತೆಯ ಬಗ್ಗೆ ವಿಚಾರಣೆ ಮಾಡಿ ವರದಿ ನೀಡುವಂತೆ ಕಾರವಾರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪತ್ರ ಬರೆದಿದ್ದರು.

ಪರಿಶೀಲನೆ ನಡೆಸಿದ ನಿರ್ದೇಶನಾಲಯದ ಪಿಎಸ್‌ಐ ಡಿ.ಎನ್.ಕುಮಾರ ಅವರು ಈ ಎಲ್ಲರೂ "ಗೊಂಡ್" ಜಾತಿಗೆ ಸೇರಿದವರು ಎಂದು ವರದಿ ನೀಡಿದ್ದರು. ಆ ವರದಿ ಅವರಿಗೆ ಕುತ್ತು ತಂದಿದೆ.

ಇದನ್ನೂ ಓದಿ:ಮದುವೆಯಾಗುವ ಕನಸು ಚಿಗುರಿಸಿದ ಟೊಮ್ಯಾಟೋ; ಹುಡುಗಿ ಹುಡುಕಲು ಮುಂದಾದ ಕೃಷಿಕ!
ಆದರೆ, ವರದಿಯ ಬಗ್ಗೆ ಆಕ್ಷೇಪಣೆ ಬಂದಿದ್ದರಿಂದ ಮರು ವಿಚಾರಣೆ ಮಾಡಿ ವರದಿ ನೀಡುವಂತೆ ನಿರ್ದೇಶನಾಲಯದ ಎಸ್‌ಪಿ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮರಳಿ ಪತ್ರ ಬರೆಯಲಾಗಿತ್ತು.

ಮರು ವಿಚಾರಣೆ ನಡೆಸಿದ ನಿರ್ದೇಶನಾಲಯದ ಇನ್ಸ್ ಪೆಕ್ಟರ್ ಗಳಾದ ಲಕ್ಷ್ಮೀಕಾಂತ ಹಾಗೂ ಅಜ್ಮತ್ ಅಲಿ ಅವರು ಗೊಂಡ್ ಜಾತಿ ಪ್ರಮಾಣಪತ್ರ ಪಡೆದವರೆಲ್ಲರೂ ಹಿಂದುಳಿದ ಪ್ರವರ್ಗ-1 ರಲ್ಲಿ ಬರುವ ಗ್ರಾಮ ಒಕ್ಕಲಿಗ ಜಾತಿಗೆ ಸೇರಿದವರು ಎಂದು ವರದಿ ನೀಡಿದ್ದರು.


ಮೊದ ವರದಿ ನೀಡಿದ ಪಿಎಸ್ ಐ ಸೂಕ್ಷ್ಮ ವಿಚಾರವನ್ನು ಸಮರ್ಪಕವಾಗಿ ವಿಚಾರಣೆ ಮಾಡದೇ, ನಿರ್ಲಕ್ಷ್ಯ ತೋರಿ, ತಪ್ಪು ವರದಿ ನೀಡಿ, ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರಿಗೆ ಅನುಕೂಲ ಮಾಡಿಕೊಟ್ಟಿರುವುದು ಕಂಡುಬಂದಿದೆ.

ವಹಿಸಿದ ಜವಾಬ್ದಾರಿಯಲ್ಲಿ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿ ತೋರಿರುವುದು ಕಂಡುಬಂದಿದೆ. ಈ ಕಾರಣಕ್ಕಾಗಿ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದಾಗಿ ಡಿಐಜಿ ಪತ್ರದಲ್ಲಿ ತಿಳಿಸಿದ್ದಾರೆ.