ಜಿಲ್ಲೆ

ಎಸ್​ಬಿಐನಿಂದ ರಿಸರ್ವ್​ ಬ್ಯಾಂಕ್​ಗೇ ನಕಲಿ ನೋಟು ಜಮೆ!; ಭಾರತೀಯ ಸ್ಟೇಟ್​ ಬ್ಯಾಂಕ್​ ವಿರುದ್ಧ ಎಫ್​ಐಆರ್

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಪ್ರಾದೇಶಿಕ ಕಚೇರಿಗೆ ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು ಜಮೆ ಮಾಡಿದ್ದ ನೋಟಿನಲ್ಲಿ ಖೋಟಾ ನೋಟುಗಳು ಪತ್ತೆಯಾಗಿವೆ.

ನೃಪತುಂಗ ರಸ್ತೆಯ ಆರ್‌ಬಿಐ ಪ್ರಾದೇಶಿಕ ಕಚೇರಿ ಎಜಿಎಂ ಮಲ್ಯ ಬಿಸ್ವಾಸ್ ಎಂಬುವರು ಈ ಸಂಬಂಧ ಹಲಸೂರು ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಬೀದರ್ ಜಿಲ್ಲೆ ಹುಮನಾಬಾದ್ ಎಸ್‌ಬಿಐ ಕರೆನ್ಸಿ ಚೆಸ್ಟ್ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಬಿಐ ಕರೆನ್ಸಿ ಚೆಸ್ಟ್‌ನಿಂದ ಆ.5ರಂದು ಆರ್‌ಬಿಐ ಪ್ರಾದೇಶಿಕ ಕಚೇರಿಗೆ ಹಣ ಜಮೆ ಮಾಡಲಾಗಿತ್ತು. ಪರಿಶೀಲನೆ ವೇಳೆ 100 ರೂ. ಮುಖಬೆಲೆಯ 5 ಖೋಟಾ ನೋಟು ಪತ್ತೆಯಾಗಿವೆ. ಬ್ಯಾಂಕ್‌ಗೆ ಜಮೆ ಮಾಡಿದ ಆರೋಪಿಗಳನ್ನು ಪತ್ತೆ ಮಾಡಬೇಕೆಂದು ದೂರಿನಲ್ಲಿ ಆರ್‌ಬಿಐ ಅಧಿಕಾರಿ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.