ಬಾಗಲಕೋಟೆ: ಕರ್ನಾಟಕದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹ ಬಂದು ಊರಲೆಲ್ಲಾ ನೀರು ನಿಂತಿದ್ದರೂ ಹೆದರದ ಜನರು ಊರಿನ ದೇವರ ಜಾತ್ರೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಘಟಪ್ರಭಾ ನದಿ ಅಬ್ಬರ ಹೆಚ್ಚಾಗಿದ್ದು, ಢವಳೇಶ್ವರ ಗ್ರಾಮದ ಹಲವು ಭಾಗ ಜಲಾವೃತವಾಗಿದೆ. ಜಲಾವೃತಗೊಂಡಿರುವ ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಊರಿನಲ್ಲಿ ಪ್ರವಾಹ ಭೀತಿ ಹೆಚ್ಚಿರುವ ಈ ಸಮಯದಲ್ಲಿ ಗ್ರಾಮಸ್ಥರೆಲ್ಲ ಸೇರಿಕೊಂಡು ಜಾತ್ರೆ ಮಾಡಿದ್ದಾರೆ. ಗ್ರಾಮದ ದೇವಿಯಾಗಿರುವ ದ್ಯಾಮವ್ವ ದೇವಿ ಜಾತ್ರೆ ನಡೆಸಲಾಗಿದೆ. ಜನರು ನೀರಿನಲ್ಲೇ ನಿಂತು ದೇವಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಮನೆಗೆ ತೆರಳುತ್ತಿದ್ದಾರೆ.