ವಿಜಯವಾಣಿ ಸುದ್ದಿಜಾಲ ಕೋಟ
ಹಲವು ಮಕ್ಕಳ ತಾಯಿ ಎಂದೇ ಹೆಸರುವಾಸಿಯಾದ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಜ.9ರಿಂದ ಜಾತ್ರೋತ್ಸವ ಸಂಭ್ರಮ.
ಖರಾಸುರ ದಂಪತಿಯಿಂದ ಸ್ಥಾಪಿತವಾದ ಒಂದಂಶದಿಂದ ಸಾತ್ವಿಕ ಸ್ವರೂಪಿಣಿ ಅಮೃತೇಶ್ವರಿ ದೇವತೆಯಾಗಿ, ಇನ್ನೊಂದು ಅಂಶದಿಂದ ಮಾರಿ ದೇವತೆಯಾಗಿ ರಾರಾಜಿಸುವ ಹಲವು ಮಕ್ಕಳ ತಾಯಿ ಕ್ಷೇತ್ರಕ್ಕೆ ತನ್ನದೇ ಮಹಾತ್ಮೆ ಇದೆ. ತಾಯಿಗೆ ಪ್ರತಿ ವರ್ಷ ಹಾಲು ಹಬ್ಬ, ಗೆಂಡ ಸೇವೆ ನಡೆಯುವುದು. ಮರುದಿನ ಢಕ್ಕೆಬಲಿ, ತುಲಾಭಾರ ಸೇವೆ, ನಿತ್ಯ ವಿವಿಧ ಸೇವಾರ್ಥ ಇರುತ್ತವೆ.
ಹಲವು ಮಕ್ಕಳ ತಾಯಿ ಪರಿವಾರ ದೇವತೆಗಳಾದ ವೀರಭದ್ರ ಗುಡಿ ರಾಷ್ಟ್ರೀಯ ಹೆದ್ದಾರಿ 17(66)ರಲ್ಲಿ ಕಂಡುಬರುತ್ತದೆ. ನಾಗ ಬನ, ಬೊಬ್ಬರ್ಯ, ಉಮ್ಮಲ್ತಿ, ಚಿಕ್ಕು, ನಂದಿ, ಪಂಜುರ್ಲಿ ದೈವಗಳಿದ್ದು ಭಕ್ತರಿಗೆ ಆರಾಧ್ಯ ದೈವಗಳು. ಸನಿಹದಲ್ಲಿ ವರ್ಣತೀರ್ಥ ಕೆರೆಯೂ ಇದ್ದು, ಈ ಕೆರೆಯ ನೀರಿನಿಂದ ಪ್ರತಿದಿನ ದೇವಿಗೆ ಅಭಿಷೇಕ ನಡೆಯುತ್ತದೆ.
ಮಕ್ಕಳಿಲ್ಲ ಎನ್ನುವ ಕೂಗು ಕೇಳಿದಾಕ್ಷಣ ನೆನಪಾಗುವುದು ಕೋಟ ಅಮೃತೇಶ್ವರಿ. ಪ್ರಮುಖವಾದ ಹರಕೆ ಬೆಳಕಿನ ಸೇವೆ ಯಕ್ಷಗಾನ. ಯಕ್ಷಗಾನ ಕಲಾಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದ ಅಮೃತೇಶ್ವರಿ ಮೇಳ 1932ರಲ್ಲಿ ಆರಂಭವಾಯಿತು. ಸಾಸ್ತಾನದ ದಿ.ಶ್ರೀನಿವಾಸ ಕಮ್ತಿ ಮುಂದಾಳತ್ವದಲ್ಲಿ ಮೇಳ ಆರಂಭವಾಯಿತು. ಈ ಸೇವೆಯಿಂದ ಎಷ್ಟೋ ಜನ ಮಕ್ಕಳಿಲ್ಲದವರು ಈ ಹರಕೆ ಹೊತ್ತು ಮಕ್ಕಳಾಗಿದ್ದು ಉಂಟು. ದೇವಿಗೆ ಸರ್ವಾಲಂಕಾರ ಪೂಜೆ, ಹೂವಿನಪೂಜೆ, ಎಣ್ಣೆ ಅಭಿಷೇಕ, ತುಲಾಭಾರ ಸೇವೆ, ಹರಿವಾಣ ನೈವೇದ್ಯ, ಸೋಣೆ ಆರತಿ, ಪಂಚಾಮೃತ ಅಭಿಷೇಕ, ಸೀರೆ ಉಡಿಸುವುದು, ಕುಂಕುಮಾರ್ಚನೆ, ಹಾಲು ಪರಮಾನ್ನ ಗೆಂಡ ಸೇವೆ, ಹಲವು ಮಕ್ಕಳಿಗೆ ಎಣ್ಣೆ ಅರ್ಚನೆ, ಹುರುಳಿ ಚೆಲ್ಲುವುದು, ಅಮೃತ ನೈವೇದ್ಯ, ಕರ್ಪೂರ ಆರತಿ, ವಾಹನ ಪೂಜೆ, ಪ್ರಸಾದ ನೋಡುವುದು, ರಕ್ತೇಶ್ವರಿಗೆ ಕೋಳಿ ಕೊಯ್ಯುವುದು, ಮುಂತಾದ ಸೇವೆಗಳು ಇಲ್ಲಿ ದಿನನಿತ್ಯ ನಡೆಯುತ್ತವೆ.
ದೇವಸ್ಥಾನದ ಅಭಿವೃದ್ಧಿಗೆ ಅಭಿವೃದ್ಧಿ ಸಮಿತಿ ರಚಿಸಿ ರಾಷ್ಟ್ರೀಯ ಹೆದ್ದಾರಿ ಸಮೀಪ ಸ್ವಾಗತ ಗೋಪುರ ರಚನೆ, ಮುಖ ಮಂಟಪ, ಸುಸಜ್ಜಿತ ಭೋಜನ ಶಾಲೆ ನಿರ್ಮಾಣ, ದಿನಂಪ್ರತಿ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ ಕಾರ್ಯ ಸಮಿತಿಯಿಂದ ನಡೆಯುತ್ತಿದೆ.
ಇತಿಹಾಸ ಪುರಾಣ ಕ್ಷೇತ್ರ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಒಟ್ಟು 6 ತಲೆಮಾರಿನವರು ಮಾಡಿಕೊಂಡು ಬಂದಿರುವುದು ಅಲ್ಲದೇ, ವಿಶೇಷವಾಗಿ ಮೂರು ತಿಂಗಳಿಗೆ ಪರ್ಯಾಯ ರೀತಿಯಲ್ಲಿ ಒಂದೊಂದು ಮನೆತನದವರು ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ.
ಜ.9ರಂದು ಪ್ರತಿಷ್ಠಾಪನಾ ವರ್ಧಂತಿ, 10 ಮತ್ತು 11ರಂದು ವಾರ್ಷಿಕ ಹಾಲು ಹಬ್ಬ ಗೆಂಡೋತ್ಸವ, ತುಲಾಭಾರ ಸೇವಾ ಕಾರ್ಯಕ್ರಮ ಜರುಗಲಿದೆ. 9ರಂದು ಬೆಳಗ್ಗೆ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿಗೆ ಪಂಚವಿಂಶತಿ ದ್ರವ್ಯಕಲಶ ಪೂರ್ವಕ ಕಲಾತತ್ವ ಹೋಮ, ಪರಿವಾರ ದೇವರಿಗೆ ನವಕ ಪ್ರಧಾನ ಕಲಾಧಿವಾಸ ಹೋಮ, 10ರಂದು ಪಂಚಗವ್ಯ ಪೂಜೆ ರಾತ್ರಿ ಗಂಟೆ 7ಕ್ಕೆ ನಾಗದೇವರ ಹಾಲಿಟ್ಟು ಸೇವೆ, ರಾತ್ರಿ 7.30ಕ್ಕೆ ಗೆಂಡಸೇವೆ, 9ಕ್ಕೆ ಅಮ್ಮನವರ ಹಾಗೂ ಬೊಬ್ಬರ್ಯ ದೇವರ ಹಾಲಿಟ್ಟು ಸೇವೆ, ಮಧ್ಯಾಹ್ನ 12.30ಕ್ಕೆ ಹಾಗೂ ರಾತ್ರಿ ಗೆಂಡಸೇವೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. 11ರಂದು ಬೆಳಗ್ಗೆ 6ಕ್ಕೆ ಢಕ್ಕೆಬಲಿ ಸೇವೆ, ಬೆಳಗ್ಗೆ 9.30ಕ್ಕೆ ದರ್ಶನ ಸೇವೆ ನಂತರ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ರಾತ್ರಿ 9.30ಕ್ಕೆ ಯಕ್ಷಗಾನ ಸೇವೆ ನಡೆಯಲಿದೆ.