ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಕನ್ಯಾ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಗೆ ಬಿಇಒ ಸುಖದೇವ್ ಗುರುವಾರ ಭೇಟಿ ನೀಡಿದ್ದರು. 
ಜಿಲ್ಲೆ

ಹೆಚ್ಚುವರಿ ಹಣ ಪಡೆದರೆ ಕ್ರಮ: ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಬಿಇಒ ಸುಖದೇವ್ ಎಚ್ಚರಿಕೆ

Gangavati - Desk - Veeresh S Ullagaddi

ದೇವದುರ್ಗ: ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿರುವ ಶುಲ್ಕ ಪಡೆಯಬೇಕು. ಹೆಚ್ಚುವರಿ ಶುಲ್ಕ ವಸೂಲಿ ಮಾಡಿದರೆ ಕಠಿಣ ಕ್ರಮ ವಹಿಸಲಾಗುವುದು ಎಂದು ಬಿಇಒ ಸುಖದೇವ್ ಎಚ್ಚರಿಸಿದರು.

ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ.

ಜಾಲಹಳ್ಳಿಯ ಜೆಜೆ ಶಿಕ್ಷಣ ಸಂಸ್ಥೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಶಾಲೆಗಳ ಪ್ರವೇಶ ಸಂದರ್ಭದಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ವಿವಿಧ ಕಾರಣ ನೀಡಿ ಪಾಲಕರಿಂದ ಹೆಚ್ಚುವರಿ ಹಣ ಪಡೆಯುವಂತಿಲ್ಲ. ಕಾರ್ಯಕ್ರಮ, ಅಸೈನ್‌ಮೆಂಟ್ ನೆಪದಲ್ಲಿ ಹೆಚ್ಚುವರಿ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಮುಖ್ಯಶಿಕ್ಷಕರನ್ನು ತರಾಟೆ ತೆಗೆದುಕೊಂಡರು.


ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ವಿದ್ಯಾರ್ಥಿಗಳಿಗೆ ಶುದ್ಧ ಕುಡಿವ ನೀರು, ಕೊಠಡಿ, ನೆರಳಿನ ವ್ಯವಸ್ಥೆ ಮಾಡಬೇಕು. ಆಗಾಗ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಬಿಇಒ ಸುಖದೇವ್ ತಾಕೀತು ಮಾಡಿದರು.
ಗ್ರಾಮದ ಕನ್ಯಾ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಹಳೆ ಕಟ್ಟಡಗಳು ತೆರವುಗೊಳಿಸುವಂತೆ ಸೂಚಿಸಿದರೂ ಕ್ರಮಕೈಗೊಂಡಿಲ್ಲ. ಶಾಲೆಗೆ ಒಳಪಟ್ಟಿರುವ ಮಗಳಿಗೆಗಳ ಬಾಡಿಗೆಯನ್ನು ಒಂದು ವರ್ಷದಿಂದ ಯಾಕೆ ವಸೂಲಿ ಮಾಡಿಲ್ಲ ಎಂದು ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಆವರಣದಲ್ಲಿ ಬಿಡಾಡಿ ದನ, ಹಂದಿ, ನಾಯಿಗಳು ಬರದಂತೆ ಕ್ರಮಕೈಗೊಳ್ಳಬೇಕು ಸೂಚಿಸಿದರು.


ಮುಖ್ಯಶಿಕ್ಷಕ ರಾಮನಗೌಡ ಮಾತನಾಡಿ, ಬಾಡಿಗೆದಾರರಿಗೆ ಮೂರು ಬಾರಿ ನೋಟಿಸ್ ಜಾರಿ ಮಾಡಲಾಗಿದೆ ಎಂದರು. ಇನ್ನು ಒಂದು ವಾರದಲ್ಲಿ ಬಾಕಿ ಹಣ ವಸೂಲಿ ಮಾಡಿ. ಬಾಡಿಗೆ ಬಾರದಿದ್ದರೆ ಪೊಲೀಸರ ಸಹಕಾರದೊಂದಿಗೆ ಹಣ ಪಡೆಯಿರಿ. ನಿರ್ಲಕ್ಷ್ಯ ಮಾಡಬಾರದು ಎಂದು ಬಿಇಒ ಸುಖದೇವ್ ಸೂಚಿಸಿದರು.