More

    ಸಂಪಾದಕೀಯ | ವಿದ್ಯಾರ್ಥಿಗಳ ಹಿತ ಕಾಪಾಡಿ; ರಾಜ್ಯದಲ್ಲಿ ಶೇ. 20ರಷ್ಟು ಖಾಸಗಿ ಶಾಲೆಗಳು ಅನಧಿಕೃತ

    ರಾಜ್ಯದಲ್ಲಿ 1,600ಕ್ಕೂ ಅನಧಿಕೃತ ಶಾಲೆಗಳಿರುವ ವಿಚಾರ ಖಚಿತಪಟ್ಟಿದ್ದರೂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಇಂತಹ ಶಾಲೆಗಳ ಪಟ್ಟಿ ಪ್ರಕಟಿಸುವ ನಿರ್ಧಾರವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ರಾಜ್ಯದಲ್ಲಿರುವ ಒಟ್ಟು ಖಾಸಗಿ ಶಾಲೆಗಳ ಪೈಕಿ ಅಂದಾಜು ಶೇ. 20ರಷ್ಟು ಶಾಲೆಗಳು ಅನಧಿಕೃತವಾಗಿರುವುದು ಕಳವಳಕಾರಿ ಸಂಗತಿ. ಹೀಗಾಗಿ, ಶಾಲಾ ದಾಖಲಾತಿಯ ಈ ಸಮಯದಲ್ಲಿ ಯಾವ ಶಾಲೆ ಅಧಿಕೃತ, ಯಾವುದು ಅನಧಿಕೃತ ಎಂಬ ಗೊಂದಲ ಹಾಗೂ ಆತಂಕ ಪಾಲಕರಿಗೆ ಎದುರಾಗಿದೆ.

    ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪರ್ಯಾಯ ವ್ಯವಸ್ಥೆ ಏನು?

    ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ, ಒಂದು ವೇಳೆ ಈ ಶೇ. 20ರಷ್ಟು ಶಾಲೆಗಳ ವಿರುದ್ಧ ಕ್ರಮ ಕೈಗೊಂಡರೆ ಅಲ್ಲಿರುವ ಅಪಾರ ಸಂಖ್ಯೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪರ್ಯಾಯ ವ್ಯವಸ್ಥೆ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಲೋಚನೆ ಏನೆಂಬುದು ತಿಳಿಯಬೇಕಿದೆ. ರಾಜ್ಯ ಪಠ್ಯಕ್ರಮವಿರುವ 7,269, ಸಿಬಿಎಸ್​ಇ ಪಠ್ಯಕ್ರಮವಿರುವ 704, ಐಸಿಎಸ್​ಇ ಪಠ್ಯಕ್ರಮದ 300 ಹಾಗೂ 9 ಅಂತಾರಾಷ್ಟ್ರೀಯ ಶಾಲೆಗಳು ರಾಜ್ಯದಲ್ಲಿವೆ. ಈ ಪೈಕಿ 1,600ಕ್ಕೂ ಹೆಚ್ಚಿನ ಶಾಲೆಗಳು, ಅಂದರೆ ಅಂದಾಜು ಶೇ. 20ರಷ್ಟು ಅನಧಿಕೃತವಾಗಿವೆ. ಮಾನ್ಯತೆ ನವೀಕರಣ ಮಾಡಿಕೊಳ್ಳದಿರುವುದು, ನೋಂದಣಿ ಇಲ್ಲದಿರುವುದು, ರಾಜ್ಯ ಪಠ್ಯಕ್ರಮ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧಿಸುತ್ತಿರುವುದು… ಈ ರೀತಿ ಅನೇಕ ನಿಯಮ ಉಲ್ಲಂಘನೆಗಳನ್ನು ಗುರುತಿಸಿ ಅನಧಿಕೃತ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ತಯಾರಿಸಿದೆ.

    ಇದನ್ನೂ ಓದಿ: ಸಂಪಾದಕೀಯ | ಗುರುತರ ಆರ್ಥಿಕ ಸಾಧನೆ; ಸ್ಮಾರ್ಟ್​ಫೋನ್ ರಫ್ತು ಪ್ರಮಾಣ ದುಪ್ಪಟ್ಟು

    ಅನಧಿಕೃತ ಶಾಲೆಗಳ ಪ್ರಮಾಣ ಶೇ. 20!

    ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಅಥವಾ ಪರೀಕ್ಷಾ ಸಮಯದಲ್ಲಿ ಈ ಪಟ್ಟಿಯನ್ನು ಪ್ರಕಟಿಸಿದ್ದರೆ ಸಂಬಂಧಪಟ್ಟ ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಪಿಯುಸಿ ಪರೀಕ್ಷೆ ಪೂರ್ಣಗೊಂಡ ಬಳಿಕ ಪಟ್ಟಿ ಪ್ರಕಟಿಸಲು ಶಿಕ್ಷಣ ಇಲಾಖೆ ಆಲೋಚಿಸಿತ್ತು. ಅದರನುಸಾರವಾಗಿ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಚುನಾವಣೆ ನೀತಿಸಂಹಿತೆ ಜಾರಿಗೊಂಡಿದ್ದರಿಂದ ಈ ಕುರಿತ ಆದೇಶ ಹೊರಡಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಈಗ ಶಾಲೆ ಅನಧಿಕೃತವಾಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಜವಾಬ್ದಾರಿ ಪಾಲಕರ ಹೆಗಲೇರಿದೆ. ಅನಧಿಕೃತ ಶಾಲೆಗಳ ಪ್ರಮಾಣ ಶೇ. 20ರಷ್ಟು ತಲುಪಿರುವುದನ್ನು ನೋಡಿದರೆ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆಯೇ ಅಥವಾ ಖಾಸಗಿಯವರ ಒತ್ತಡಕ್ಕೆ ಮಣಿದಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ.

    ಕಾನೂನು ಕ್ರಮ ಅಗತ್ಯ

    ಹತ್ತಾರು ವರ್ಷಗಳಿಂದ ಅನಧಿಕೃತ ಶಾಲೆಗಳು ಬಹಿರಂಗವಾಗಿ ಪೋಷಕರು, ಮಕ್ಕಳಿಗೆ ಮೋಸ ಮಾಡುತ್ತಿರುವುದಕ್ಕೆ ಅಧಿಕಾರಿಗಳೇ ಹೊಣೆಯಾಗಿದ್ದು, ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸ) ಇತ್ತೀಚೆಗೆ ಒತ್ತಾಯಿಸಿದೆ. ನಿಜ, ಇವತ್ತಿನ ಕಾಲಮಾನದಲ್ಲಿ ಶಾಲೆಗಳನ್ನು ನಡೆಸುವುದು ಖರ್ಚಿನ ಬಾಬತ್ತೇ ಹೌದು. ಆದರೂ ಶಿಕ್ಷಣವು ಕೇವಲ ಲಾಭದಾಯಕ ವ್ಯಾಪಾರವಲ್ಲ; ಅದೊಂದು ಸಾಮಾಜಿಕ ಜವಾಬ್ದಾರಿ ಕೂಡ ಎಂಬ ವಿಚಾರವನ್ನು ಅರಿತುಕೊಂಡು, ಕಾನೂನು-ನಿಯಮಗಳಿನುಸಾರವಾಗಿ ಅಧಿಕೃತವಾಗಿಯೇ ಶಾಲೆಗಳನ್ನು ನಡೆಸುವ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಶಿಕ್ಷಣ ಇಲಾಖೆ ಇತ್ಯರ್ಥಪಡಿಸಬೇಕಿದೆ.

    ಇದನ್ನೂ ಓದಿ: ಸಂಪಾದಕೀಯ | ರಾಜತಾಂತ್ರಿಕ ನಡೆ; ಅರುಣಾಚಲ, ಕಾಶ್ಮೀರದಲ್ಲಿ ಜಿ 20 ಸಭೆಗಳ ಆಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts