More

    ಸಂಪಾದಕೀಯ | ರಾಜತಾಂತ್ರಿಕ ನಡೆ; ಅರುಣಾಚಲ, ಕಾಶ್ಮೀರದಲ್ಲಿ ಜಿ 20 ಸಭೆಗಳ ಆಯೋಜನೆ

    ಭಾರತವು ಕಳೆದ ಡಿಸೆಂಬರ್ 1ರಿಂದ ಜಿ 20 ಸಂಘಟನೆಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಬರುವ ಸೆಪ್ಟೆಂಬರ್ 9 ಮತ್ತು 10ರಂದು ನವದೆಹಲಿಯಲ್ಲಿ ಜಿ 20 ಶೃಂಗಸಭೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಂದಾಜು 200 ಸಭೆಗಳು ನಡೆಯಲಿವೆ.

    ಈಗಾಗಲೇ ಉದಯಪುರದಲ್ಲಿ ಶೆರ್ಪಾ, ಬೆಂಗಳೂರಿನಲ್ಲಿ ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಉಪಮುಖ್ಯಸ್ಥರ, ಮುಂಬೈನಲ್ಲಿ ಅಭಿವೃದ್ಧಿ ಕಾರ್ಯಪಡೆ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಹಲವಾರು ಸಭೆಗಳನ್ನು ಆಯೋಜಿಸಲಾಗಿದೆ. ಈ ಪೈಕಿ ಗಮನಸೆಳೆದಿರುವುದು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಮಾರ್ಚ್ 25 ಮತ್ತು 26ರಂದು ನಡೆದ ಸಭೆ ಹಾಗೂ ಮುಂಬರುವ ಮೇ 23ರಂದು ಶ್ರೀನಗರದಲ್ಲಿ ನಡೆಯಲಿರುವ ಸಭೆ.

    ಜಿ 20 ಸಂಘಟನೆಯು ವಿಶ್ವದ ಪ್ರಮುಖ ಮುಂದುವರಿದ ಮತ್ತು ಉದಯೋನ್ಮುಖ ರಾಷ್ಟ್ರಗಳು ಒಟ್ಟಾಗಿ ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಹಣಕಾಸು ಕಾರ್ಯಸೂಚಿಯ ಸಹಕಾರಕ್ಕಾಗಿ ರೂಪಿಸಿಕೊಂಡ ಪ್ರಮುಖ ವೇದಿಕೆಯಾಗಿದೆ. ಭಾರತ, ಅಮೆರಿಕ, ಬ್ರಿಟನ್, ರಷ್ಯಾ, ಆಸ್ಟ್ರೇಲಿಯಾ, ಐರೋಪ್ಯ ಒಕ್ಕೂಟ ಮುಂತಾದ ರಾಷ್ಟ್ರಗಳು ಇದರಲ್ಲಿವೆ. ಗಡಿ ತಂಟೆಕೋರ ಚೀನಾ ಕೂಡ ಈ ಸಂಘಟನೆಯಲ್ಲಿದೆ.

    ಇಟಾನಗರದಲ್ಲಿ ಜರುಗಿದ ಜಿ 20 ಸಭೆಯಲ್ಲಿ ವಿವಿಧ ರಾಷ್ಟ್ರಗಳ ಅಂದಾಜು 100 ಪ್ರತಿನಿಧಿಗಳು ಭಾಗವಹಿಸಿದ್ದರು. ‘ಸಂಶೋಧನೆ, ನಾವೀನ್ಯತೆ ಉಪಕ್ರಮ, ಸಂಗ್ರಹಣೆ’ ಕುರಿತ ಈ ಸಭೆಯಲ್ಲಿ ಚೀನಾ ಪ್ರತಿನಿಧಿಗಳು ಪಾಲ್ಗೊಂಡಿರಲಿಲ್ಲ. ಚೀನಾದ ಈ ನಡೆಗೆ ಕಾರಣ ಅದೇ ಗಡಿ ತಕರಾರು. ಅರುಣಾಚಲ ಪ್ರದೇಶ ರಾಜ್ಯದ ಕೆಲ ಭಾಗ ತನಗೆ ಸೇರ್ಪಡೆಯಾಗಬೇಕೆಂಬುದು ಚೀನಾದ ಎಂದಿನ ವಾದವಾಗಿದೆ. ಮೆಕ್ ಮಹೊನ್ ಗಡಿ ರೇಖೆಯನ್ನು ಕೂಡ ಅದು ಒಪ್ಪಿಕೊಳ್ಳುವುದಿಲ್ಲ. ತನ್ನ ಪ್ರತಿಪಾದನೆಯನ್ನು ಪುನರುಚ್ಚರಿಸುವ ಉದ್ದೇಶದಿಂದಲೇ ಈ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಇದೇ ವೇಳೆ, ಅರುಣಾಚಲ ಪ್ರದೇಶದ ಕೆಲ ಸ್ಥಳಗಳಿಗೆ ಮರುನಾಮಕರಣ ಮಾಡಿದ ಪಟ್ಟಿಯನ್ನು ಪ್ರಕಟಿಸಿ ತಕರಾರು ಮುಂದಿಟ್ಟಿತು. ಆದರೆ, ಭಾರತ ಇದನ್ನು ತಿರಸ್ಕರಿಸುವ ಮೂಲಕ ರಾಜತಾಂತ್ರಿಕ ನಡೆ ಅನುಸರಿಸಿತು.

    ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಶ್ರೀನಗರದಲ್ಲಿ ಬರುವ ಮೇ 23ರಂದು ಜಿ 20ಯ ಪ್ರವಾಸೋದ್ಯಮ ಕಾರ್ಯಪಡೆಯ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಕೂಡ ಚೀನಾ ಭಾಗವಹಿಸುವ ಸಾಧ್ಯತೆಗಳು ಇಲ್ಲ. ಶ್ರೀನಗರದಲ್ಲಿ ಸಭೆ ಆಯೋಜಿಸಿರುವುದಕ್ಕೆ ಪಾಕಿಸ್ತಾನ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ, ಭಾರತ ಇದನ್ನೆಲ್ಲ ಕಡೆಗಣಿಸಿ ಸಹಜವಾಗಿಯೇ ಸಭೆ ಆಯೋಜನೆಯತ್ತ ಗಮನ ನೀಡಿದೆ.

    ಶ್ರೀನಗರದಲ್ಲಿ ಸಭೆ ಮುಗಿದ ನಂತರ ಪ್ರತಿನಿಧಿಗಳನ್ನು ಮೇ 24ರಂದು ಶ್ರೀನಗರದ ದಾಲ್ ಸರೋವರ ಸೇರಿದಂತೆ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಕರೆದೊಯ್ಯಲು ಉದ್ದೇಶಿಸಲಾಗಿದೆ. ಒಂದೊಮ್ಮೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದ ಕಾಶ್ಮೀರದಲ್ಲಿ ಇದೇ ವಿಷಯ ಸಂಬಂಧಿ ಸಭೆ ಆಯೋಜಿಸಿರುವುದು ಹಾಗೂ ಪ್ರತಿನಿಧಿಗಳನ್ನು ಪ್ರಮುಖ ಪ್ರವಾಸಿ ತಾಣಗಳಿಗೆ ಕರೆದೊಯ್ಯುವುದು ಕೂಡ ಕಾಶ್ಮೀರವು ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂಬ ಸಂದೇಶ ರವಾನಿಸುವ ಕ್ರಮ ಎನ್ನಬಹುದಾಗಿದೆ. ಚೀನಾ ಹಾಗೂ ಪಾಕ್ ಆಕ್ಷೇಪಗಳಿಗೆ ಕಿಮ್ಮತ್ತು ನೀಡದೆ ಸಹಜ ರೀತಿಯಲ್ಲಿ ಜಿ 20 ಸಭೆಗಳನ್ನು ಆಯೋಜಿಸಿರುವುದು ಉತ್ತಮ ನಡೆಯೇ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts