More

    ಸಂಪಾದಕೀಯ | ಮೂಲಸೌಕರ್ಯ ಕಲ್ಪಿಸಲಿ; ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಬೆದರಿಕೆ

    ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ಏರುತ್ತಿರುವ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಯ 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮತದಾರರು ಚುನಾವಣೆ ಬಹಿಷ್ಕಾರದ ಬೆದರಿಕೆ ಹಾಕಿದ್ದಾರೆ. ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಜನರು ತಮ್ಮಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನ ಮಾಡುವುದು ಪ್ರಜಾತಂತ್ರದ ಮಹತ್ವದ ಪ್ರಕ್ರಿಯೆಯಾಗಿದ್ದು, ಈ ವ್ಯವಸ್ಥೆಯ ಯಶಸ್ಸಿಗೆ ಬುನಾದಿ ಕೂಡ ಆಗಿದೆ.

    ಮತದಾನ ಬಹಿಷ್ಕಾರದ ನಿರ್ಣಯ ಅಪೇಕ್ಷಣೀಯ ಬೆಳವಣಿಗೆಯಲ್ಲ್ಲಾದರೂ, ಈ ಹಳ್ಳಿಗಳ ಜನರು ದೀರ್ಘಕಾಲದಿಂದ ತಮ್ಮ ಬೇಡಿಕೆಗಳು ಈಡೇರದೆ ಎಷ್ಟು ರೋಷಗೊಂಡಿದ್ದಾರೆ ಹಾಗೂ ಜನಪ್ರತಿನಿಧಿಗಳ ಬಗೆಗೆ ನಿರಾಸೆ ತಾಳಿದ್ದಾರೆ ಎಂಬುದನ್ನು ಬಹಿಷ್ಕಾರದ ಪ್ರತಿಭಟನೆಯು ಬಿಂಬಿಸುತ್ತದೆ. ಮೇ 10ರ ಮತದಾನ ದಿನ ಸಮೀಪಿಸಿದಂತೆ ಇಂತಹ ಬಹಿಷ್ಕಾರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಪ್ರತಿನಿಧಿಸುವ ಕೊರಟಗೆರೆ ವಿಧಾನಸಭೆ ಕ್ಷೇತ್ರದಲ್ಲಿ 13 ಗ್ರಾಮಗಳ ಜನರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

    ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ಕೊಟ್ಟಿದ್ದನ್ನು ವಿರೋಧಿಸಿ ತಾವು ನೀಡಿದ ಮನವಿಗಳಿಗೆ ಸ್ಪಂದನೆ ದೊರೆಯದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ಈಗ ಮತದಾನ ಬಹಿಷ್ಕಾರ ಅಭಿಯಾನ ನಡೆಸುತ್ತಿದ್ದಾರೆ. ಈ ರೀತಿ ಬಹಿಷ್ಕಾರದ ನಿರ್ಧಾರ ಕೈಗೊಂಡಿರುವ ಮತದಾರರ ಸಂಖ್ಯೆ 5000ಕ್ಕೂ ಅಧಿಕ ಎಂಬುದು ಗಮನಾರ್ಹ. ಮತದಾನ ಬಹಿಷ್ಕಾರ ಪ್ರಕರಣಗಳ ಬಹುಪಾಲು ಕಾರಣ ಮೂಲಸೌಕರ್ಯಗಳ ಕೊರತೆ. ರಸ್ತೆ, ಮೋರಿ, ಸೇತುವೆ, ಕಾಲುಸಂಕ ನಿರ್ಮಾಣ ಇತ್ಯಾದಿ ಅಂಥ ದೊಡ್ಡದೇನಲ್ಲದ ಬೇಡಿಕೆಗಳು ಸಹ ಈಡೇರದ ಕಾರಣಗಳಿಂದಲೇ ಸಾಕಷ್ಟು ಜನರು ಆಕ್ರೋಶಗೊಂಡಿದ್ದಾರೆ.

    ಗ್ರಾಮದಲ್ಲಿ ಸೂಕ್ತ ರಸ್ತೆ ಇಲ್ಲದ್ದರಿಂದ ನರಕಯಾತನೆ ಅನುಭವಿಸುತ್ತಿದ್ದು, ಚುನಾವಣೆಗೂ ಮುನ್ನ ಊರಿಗೆ ರಸ್ತೆ ನಿರ್ಮಾಣ ಮಾಡದಿದ್ದಲ್ಲಿ ಮತಯಾಚನೆಗೆ ರಾಜಕಾರಣಿಗಳು ಬರುವ ಅಗತ್ಯವಿಲ್ಲ ಎಂದು ಅನೇಕ ಗ್ರಾಮಗಳ ಜನತೆ ಸಾರಿದ್ದಾರೆ. ಮಲೆನಾಡು ಭಾಗದಲ್ಲಂತೂ ಸುಸಜ್ಜಿತ ರಸ್ತೆ, ಕಾಲುಸಂಕ ಇಲ್ಲದ್ದರಿಂದ ಸಂಚಾರ ದುಸ್ತರವಾಗಿದೆ; ಮಳೆಗಾಲದಲ್ಲಂತೂ ಅಸಾಧ್ಯ ಎನ್ನುವಂತಾಗಿದೆ ಎಂಬ ಆಕ್ರೋಶಗಳು ವ್ಯಕ್ತವಾಗಿವೆ. ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರು ಪಟ್ಟು ಹಿಡಿದಲ್ಲಿ ಮತದಾರರ ಮನವೊಲಿಸುವ ಕಾರ್ಯ ಸಹಜವಾಗಿ ಅಧಿಕಾರಿಗಳ ಹೆಗಲಿಗೇರುತ್ತದೆ. ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಬೇಡಿಕೆಗಳನ್ನು ಈಡೇರಿಸುವುದು ದುಸ್ತರವೇ ಆಗಿದೆ. ಆದರೂ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇತಿಮಿತಿಗೆ ಬರುವ ಬೇಡಿಕೆಗಳನ್ನು ಈಡೇರಿಸಿ ಗ್ರಾಮಸ್ಥರನ್ನು ಮನವೊಲಿಸುವ ತುರ್ತು ಅಗತ್ಯವಿದೆ.

    ಜನಪ್ರತಿನಿಧಿಗಳು ಕೂಡ ತಮ್ಮನ್ನು ಆಯ್ಕೆ ಮಾಡಿದ ಮತದಾರರ ಬೇಡಿಕೆಗಳನ್ನು ಈಡೇರಿಸಲು, ಸಮಸ್ಯೆಗಳನ್ನು ನಿವಾರಿಸಲು ಈ ಮೊದಲೇ ಗಮನ ನೀಡಬೇಕಿತ್ತು. ಬಹಿಷ್ಕಾರಕ್ಕೆ ಮುಂದಾಗಿರುವವರು ವೈಯಕ್ತಿಕ ಸಮಸ್ಯೆಗಳನ್ನು ಮುಂದು ಮಾಡಿಲ್ಲ; ಬದಲಾಗಿ, ತಮ್ಮೂರಿನ ಸಾರ್ವಜನಿಕ ಸಮಸ್ಯೆಗಳ ನಿವಾರಣೆಯತ್ತ ಆಸಕ್ತರಾಗಿದ್ದಾರೆ ಎಂಬುದು ಗಮನಾರ್ಹವಾಗಿದೆ. ಮತದಾನ ಬಹಿಷ್ಕಾರವು ಒಂದು ರೀತಿಯ ಹೋರಾಟವೇ ಆಗಿದ್ದು, ಚುನಾವಣೆ ಸಂದರ್ಭದಲ್ಲಾದರೂ ಬೇಡಿಕೆಗಳು ಈಡೇರಲಿ ಎಂಬ ಆಶಯ ಇದರಲ್ಲಡಗಿದೆ. ಜನರ ಬೇಕು-ಬೇಡಿಕೆಗಳನ್ನು ಅರಿತು ಮೂಲಸೌಕರ್ಯಗಳನ್ನು ಕಲ್ಪಿಸಿದರೆ, ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಕೈಗೊಂಡರೆ ಮತದಾನ ಬಹಿಷ್ಕರಿಸುವ ಪ್ರಕರಣಗಳು ಉದ್ಭವಿಸುವ ಸಾಧ್ಯತೆಗಳು ಇರುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts