ಜಿಲ್ಲೆ

ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಹಾನಿ

ಸೌಮ್ಯ ಆರ್

ಮೂಲ್ಕಿ: ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಬೀಸಿದ ಗಾಳಿ ಹಾಗೂ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ.

ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಇಂದಿರಾನಗರ ಕೊಪ್ಪಳ ಬಳಿ ಭಾರಿ ಗಾತ್ರದ ಮರ ವಿದ್ಯುತ್ ತಂತಿ ಮೇಲೆ ಬಿದ್ದು ರಸ್ತೆಗೆ ಉರುಳಿದೆ. ಈ ಸಂದರ್ಭ ಸ್ಥಳೀಯ ಮಸೀದಿ ಆವರಣ ಗೋಡೆ, ತೆಂಗಿನ ಮರ ಹಾಗೂ ಎರಡು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಮೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ವಿದ್ಯುತ್ ಕಂಬ ತೆರವುಗೊಳಿಸುವ ಕಾರ್ಯ ನಡೆದಿದೆ.

ಸ್ಥಳಕ್ಕೆ ಪಂಚಾಯಿತಿ ಸದಸ್ಯ ಅಬ್ದುಲ್ ಅಜೀಜ್ ಹಾಗೂ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮೂಲ್ಕಿ ನಪಂ ವ್ಯಾಪ್ತಿಯ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯ ಕಾಡು ಎಂಬಲ್ಲಿ ಸುಮ ಎಂಬುವರ ಮನೆಯ ಗೋಡೆ ಕುಸಿದು ಬಿದ್ದಿದೆ. ತಾಲೂಕು ವ್ಯಾಪ್ತಿಯ ಪಾವಂಜೆ ಗ್ರಾಮದ ಜಯಶ್ರೀ ಎಂಬುವರ ವಾಸ್ತವ್ಯದ ಮನೆಯ ಮೇಲೆ ತೆಂಗಿನ ಮರ ಬಿದ್ದು, ಮನೆಯ ಮೇಲ್ಛಾವಣಿ ಹಾನಿಯಾಗಿದೆ.

ಅತಿಕಾರಿಬೆಟ್ಟು ಗ್ರಾಮದ ಕಕ್ವ ಎಂಬಲ್ಲಿ ಶಾರದಾ ಪೂಜಾರ್ತಿ ಎಂಬುವರ ಮನೆಯ ಮೇಲೆ ಮರ ಬಿದ್ದು ಛಾವಣಿ ಕುಸಿದು ಹಾನಿಯಾಗಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್ ಮತ್ತು ಪಿಡಿಒ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇಂದಿರಾನಗರ ಕೊಪ್ಪಳ ಬಳಿ ಭಾರೀ ಗಾತ್ರದ ಮರ ವಿದ್ಯುತ್ ತಂತಿ ಮೇಲೆ ಬಿದ್ದು ರಸ್ತೆಗೆ ಉರುಳಿದೆ.