ವಿಜಯವಾಣಿ ಸುದ್ದಿಜಾಲ ಕುಂದಾಪುರ
ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸಾಮರ್ಥ್ಯದ ಹೆಚ್ಚಳಕ್ಕೆ ಉತ್ತಮ ವಾತಾವರಣ, ಸಂಸ್ಕಾರ ಬೇಕು. ಕಲಿಕೆಯ ವಿಷಯವು ಬರಿಯ ತಿಳಿವಳಿಕೆ ಮಾತ್ರವಲ್ಲ, ವಿಷಯವನ್ನು ಅರ್ಥಪೂರ್ಣ ಮಾಡಬಲ್ಲ ವ್ಯಕ್ತಿತ್ವದ ಅವಶ್ಯಕತೆ ಇರುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಗಮನ ಕೇಂದ್ರೀಕರಿಸಿದರೆ ಪಾಂಡಿತ್ಯ ವೃದ್ಧಿಯಾಗುತ್ತದೆ ಎಂದು ಇಂಡಿಯನ್ ರೆಡ್‌ಕ್ರಾಸ್ ಕುಂದಾಪುರ ಘಟಕ ಅಧ್ಯಕ್ಷ ಜಯಕರ ಶೆಟ್ಟಿ ಹೇಳಿದರು.
ಕುಂದಾಪುರ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ 18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ನಾಗರಾಜ ಯು., ಸಾಂಸ್ಕೃತಿಕ ಸಂಚಾಲಕ ಡಾ.ಭಾಗೀರಥಿ ನಾಯ್ಕ, ಅರಣ್ಯ ಗುತ್ತಿಗೆದಾರ ಜೆ.ಪಿ. ಶೆಟ್ಟಿ ಕಟ್ಕೆರೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಭಾಕರ ಖಾರ್ವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ.ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕಿ ಶರಾವತಿ ನಿರೂಪಿಸಿದರು. ವಿದ್ಯಾರ್ಥಿ ನಾಯಕ ನಿತಿನ್ ಕುಮಾರ್ ವಂದಿಸಿದರು.