ಜಿಲ್ಲೆ

ಮರುಭೂಮಿಯಲ್ಲಿ ಕುಳಿತ ಅನುಭವ

Avinash R

ಸುಬ್ರಹ್ಮಣ್ಯ: ನಮ್ಮ ಶಾಲೆಯ ಮೇಲ್ಛಾವಣಿ ದುರಸ್ತಿ ಮಾಡಿ ಕೊಡಿ. ನಮಗೆ ಕುಳಿತುಕೊಳ್ಳಲು ಬೆಂಚ್ ಬೇಕು. ತರಗತಿಯಲ್ಲಿ ಫ್ಯಾನ್ ಇಲ್ಲದೆ ಮರುಭೂಮಿಯಲ್ಲಿ ಕುಳಿತಂತೆ ಆಗುತ್ತದೆ. ಕಳೆದ ವರ್ಷ ಮಕ್ಕಳ ಗ್ರಾಮಸಭೆಯಲ್ಲಿ ಇಟ್ಟ ಬೇಡಿಕೆಗಳೇ ಇನ್ನೂ ಈಡೇರಿಲ್ಲ ಶೀಘ್ರ ಈಡೇರಿಸಿ ಎಂದು ಶನಿವಾರ ನಡೆದ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯಲ್ಲಿ ಶಾಲಾ ಮಕ್ಕಳು ಬೇಡಿಕೆ ಇಟ್ಟಿದ್ದಾರೆ.

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ 2024-25ನೇ ಸಾಲಿನ ಮಕ್ಕಳ ಗ್ರಾಮಸಭೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು. ಸುಬ್ರಹ್ಮಣ್ಯ ಎಸ್‌ಎಸ್‌ಪಿಯು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಶಿಲ್ಪಾ ಅಧ್ಯಕ್ಷತೆ ವಹಿಸಿದ್ದರು.

ಮೇಲ್ಛಾವಣಿ ದುರಸ್ತಿ ಅಗತ್ಯ

ಯೇನೆಕಲ್ಲು ಪ್ರೌಢಶಾಲೆಯ ವಿದ್ಯಾರ್ಥಿ ರಂಜಿತ್ ಮಾತನಾಡಿ, ನಮ್ಮ ಶಾಲೆಯ ಮೇಲ್ಛಾವಣಿ ದುರಸ್ತಿ ಮಾಡುವಂತೆ ಕಳೆದ ವರ್ಷ ಬೇಡಿಕೆ ಸಲ್ಲಿಸಿದ್ದರೂ ದುರಸ್ತಿ ಮಾಡಿಲ್ಲ. ಈ ಬಾರಿಯಾದರೂ ಶೀಘ್ರ ಮೇಲ್ಛಾವಣಿ ದುರಸ್ತಿ ಮಾಡಿ ಎಂದು ಒತ್ತಾಯಿಸಿದರು. ಶಾಲಾ ಕಟ್ಟಡ ಶಿಥಿಲಗೊಂಡಿರುವ ಕಾರಣ ಈ ಬಗ್ಗೆ ನಿರ್ಲಕ್ಷೃ ವಹಿಸದೆ ಶೀಘ್ರ ದುರಸ್ತಿಗೊಳಿಸಿ ಎಂದು ಗ್ರಾಪಂ. ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಚು ಮತ್ತು ಫ್ಯಾನ್ ವ್ಯವಸ್ಥೆ ಮಾಡಿ

ಸುಬ್ರಹ್ಮಣ್ಯ ಮಾದರಿ ಶಾಲೆ ವಿದ್ಯಾರ್ಥಿ ಚೇತನ್ ಮಾತನಾಡಿ, ನಮ್ಮ ಶಾಲೆಯಲ್ಲಿ ಕುಳಿತುಕೊಳ್ಳಲು ಬೆಂಚ್ ಇಲ್ಲ. ಒಂದು ತರಗತಿಯಲ್ಲಿ 47 ಮಕ್ಕಳಿದ್ದೇವೆ. ತರಗತಿಯಲ್ಲಿ ಫ್ಯಾನ್ ವ್ಯವಸ್ಥೆ ಇಲ್ಲದೆ ಮರುಭೂಮಿಯಲ್ಲಿ ಕುಳಿತ ಅನುಭವ ಆಗುತ್ತದೆ. ನಮ್ಮ ಶಾಲೆ ಮೂರು ವರ್ಷದ ಬಳಿಕ ಈ ಪ್ರದೇಶದಲ್ಲಿ ಇರುವುದಿಲ್ಲ ಎನ್ನಲಾಗುತ್ತಿದೆ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಗ್ರಾ.ಪಂ. ಸದಸ್ಯ ರಾಜೇಶ್ ಎನ್‌ಎಸ್, ನಿಮ್ಮ ಈಗಿರುವ ಶಾಲೆಯ ಸ್ಥಳ ಬದಲಾವಣೆಗೆ ವ್ಯವಸ್ಥೆ ನಡೆಯುತ್ತಿದೆ. ನಿಮಗೆ ಹೊಸ ಶಾಲಾ ಕಟ್ಟಡ ಬಂದ ಬಳಿಕವೇ ನಿಮ್ಮನ್ನು ಅಲ್ಲಿಂದ ತೆರವು ಮಾಡುವುದು ಎಂದು ತಿಳಿಸಿದರು.

ತಂಬಾಕು ಉತ್ಪನ್ನಕ್ಕೆ ಕಡಿವಾಣ ಹಾಕಿ

ಸುಬ್ರಹ್ಮಣ್ಯದಲ್ಲಿ ತಂಬಾಕು ವಿಚಾರದಲ್ಲಿ ಕಠಿಣ ಕ್ರಮಕೈಗೊಂಡು ನಿಯಂತ್ರಣ ಹಾಕುವಂತೆ ವಿದ್ಯಾಥಿಗಳು ಒತ್ತಾಯಿಸಿದರು. ಈ ಬಗ್ಗೆ ಕ್ರಮದ ಭರವಸೆಯನ್ನು ಅಧಿಕಾರಿಗಳು ನೀಡಿದರು.

ಹೆಚ್ಚುವರಿ ಬಸ್ ಅತ್ಯಗತ್ಯ

ಐನೆಕಿದು, ಹರಿಹರ ಭಾಗಕ್ಕೆ ಸಂಜೆ ಶಾಲೆ ಬಿಡುವ ವೇಳೆ ಹೆಚ್ಚುವರಿ ಬಸ್ ಬಿಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು. ಐನೆಕಿದು-ಕೋಟೆ ಸಂಪರ್ಕ ರಸ್ತೆ ದುರಸ್ತಿಗೆ ಒತ್ತಾಯಿಸಲಾಯಿತು. ಶಾಲೆಗಳ ಕಸ ವಿಲೇವಾರಿ ಮಾಡಲು ಕಸ ಸಾಗಾಟ ವಾಹನ ಶಾಲೆಗಳಿಗೆ ವಾರಕ್ಕೆ 1-2 ಬಾರಿ ಬರುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು.

ನಿವೃತ್ತ ಮುಖ್ಯಶಿಕ್ಷಕ ಬಾಲಕೃಷ್ಣ ಹೇಮಳ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಸದಸ್ಯರಾದ ರಾಜೇಶ್ ಎನ್.ಎಸ್., ಶಿವರಾಮ, ಮಲ್ಲಿಕಾ, ದಿವ್ಯಾ ಬಿ., ದಿಲೀಪ್, ನಾರಾಯಣ, ಪಿಡಿಒ ಮಹೇಶ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ ಡಿ ಸ್ವಾಗತಿಸಿ, ವಂದಿಸಿದರು.