ಬೆಂಗಳೂರು: ಜಗತ್ತಿನ ಪ್ರಸಿದ್ಧ ಚಿತ್ರಕಲಾವಿದ ನಿಕೋಲಸ್ ರೋರಿಚ್ 150ನೇ ಜನ್ಮದಿನದ ಪ್ರಯುಕ್ತ ಕರ್ನಾಟಕ ಚಿತ್ರಕಲಾ ಪರಿಷತ್ ಸ್ಪೊಮಿನಾಯಾ ರೋರಿಚ್-150 ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ನ.8 ರಿಂದ 18 ರವರೆಗೆ ನಡೆಯುವ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಲಿದ್ದು, ರಷ್ಯನ್ ಒಕ್ಕೂಟದ ಕಾನ್ಸುಲ್ ಜನರಲ್ ವಲೇರಿ ಖೋಡ್ಜೇವ್ ಹಾಗೂ ಭುರುಕಾ ಗ್ರೂಪ್ ಉಪಾಧ್ಯಕ್ಷ ಎಸ್.ಎನ್.ಅಗರವಾಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
1874ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್‌ನಲ್ಲಿ ಜನಿಸಿದ ನಿಕೋಲಸ್ ರೋರಿಚ್ ನಂತರ ಭಾರತದ ಹಿಮಾಲಯದ ಕಣಿವೆ ಪ್ರದೇಶಕ್ಕೆ ಬಂದು ನೆಲೆಸಿ ಅನೇಕ ಚಿತ್ರಗಳನ್ನು ಬರೆದಿದ್ದಾರೆ. ಸಾಂಸ್ಕೃತಿಕ, ಧಾರ್ಮಿಕ, ಸಾಂಪ್ರದಾಯಿಕ ದೂರದೃಷ್ಟಿ ಇರಿಸಿಕೊಂಡಿದ್ದ ರೋರಿಚ್ ಬರೆದಿರುವ ಸುಮಾರು 8 ಸಾವಿರ ಕಲಾಕೃತಿಗಳು ಜಗತ್ತಿನಾದ್ಯಂತ ಮನ್ನಣೆ ಪಡೆದಿವೆ.
ನಿಕೋಲಸ್ ಪುತ್ರ ಸ್ವೆತೋಸ್ಲಾವ್ ರೋರಿಚ್ ಬೆಂಗಳೂರಿನಲ್ಲಿ ನೆಲೆಸಿದ್ದ ಕಾರಣಕ್ಕೆ ಚಿತ್ರಕಲಾ ಪರಿಷತ್ತಿನ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು. ಒಂದರ್ಥದಲ್ಲಿ ಪರಿಷತ್ತಿನ ಸ್ಥಾಪನೆಗೆ ಪ್ರಮುಖ ಪ್ರೇರಕರಾಗಿದ್ದರು. ರೋರಿಚ್‌ರವರ 36 ಅಪರೂಪದ ಪೇಂಟಿಂಗ್‌ಗಳನ್ನು ಹಾಗೂ ತಮ್ಮ 63 ಪೇಂಟಿಂಗ್‌ಗಳನ್ನು ಪರಿಷತ್ತಿಗೆ ಉಡುಗೊರೆಯಾಗಿ ನೀಡಿದ್ದು, ಪರಿಷತ್ತಿನ ಗ್ಯಾಲರಿಯಲ್ಲಿದ್ದ ಆ 36 ಪೇಂಟಿಗ್‌ಗಳನ್ನು ಇದೇ ಮೊದಲ ಬಾರಿಗೆ ರೋರಿಚ್ 150ನೇ ಜನ್ಮದಿನದ ಸಂದರ್ಭದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತಿದೆ.
ರೋರಿಚ್‌ರವರ ಪೇಂಟಿಗ್‌ಗಳು ಅತ್ಯಂತ ಬೆಲೆಬಾಳುವ ಕಲಾಕೃತಿಗಳಾಗಿದ್ದು, ಇತ್ತೀಚಿಗೆ ಸ್ವಿಡ್ಜರ್‌ಲ್ಯಾಂಡ್‌ನಲ್ಲಿ 22 ಕೋಟಿ ರೂಪಾಯಿಗೆ ಒಂದು ಪೇಂಟಿಂಗ್ ಹರಾಜಾಗಿದೆ. ‘ಸಂಸ್ಕೃತಿಯು ಅತ್ಯುನ್ನತ ಆನಂದ, ಸೌಂದರ್ಯ, ಜ್ಞಾನದ ಸಂಗ್ರಹ’ ಎಂಬ ರೋರಿಚ್ ಮಾತು ಅವರ ಚಿತ್ರಕಲೆಗಳಲ್ಲಿ ಪ್ರತಿಬಿಂಬಿತವಾಗಿವೆ ಎಂದು ಬಿ.ಎಲ್.ಶಂಕರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಟಿ.ಪ್ರಭಾಕರ್, ಡಾ.ಲಕ್ಷ್ಮೀಪತಿಬಾಬು, ಕಾರ್ಯದರ್ಶಿ ಶಶಿಧರ, ಡಾ.ಅಪ್ಪಾಜಯ್ಯ, ಚಂದ್ರಶೇಖರ್, ರಾಮಕೃಷ್ಣಪ್ಪ, ಸದಸ್ಯರಾದ ಉಷಾ. ವಿನೋದ, ವಸ್ತುಸಂಗ್ರಹಾಲಯದ ಮೇಲ್ವಿಚಾರಕಿ ಡಾ.ವಿಜಯಶ್ರೀ ಮತ್ತಿತರರಿದ್ದರು.