ಜಿಲ್ಲೆ

ನೆರೆ ಸಂತ್ರಸ್ತರಿಗೆ ರೂಪಾಲಿ ನೆರವು

Uttara Kannada - Subash Hegde

ಕಾರವಾರ : ಪ್ರವಾಹದಿಂದ ಮನೆಗೆ ನೀರು ನುಗ್ಗಿದಾಗ ಅವರಿಗೆ ಆಗಿರುವ ನೋವು ಕಂಡರೆ ಮನಸ್ಸಿಗೆ ದುಃಖವಾಗುತ್ತದೆ ಇಂತಹ ಕಷ್ಟ ಯಾರಿಗೂ ಬರದಿರಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರೂಪಾಲಿ ಎಸ್‌ ನಾಯ್ಕ ಮರುಕಪಟ್ಟರು.

ಅತಿಯಾದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಕಾರವಾರ ತಾಲ್ಲೂಕಿನ ಚೆಂಡಿಯಾ ಗ್ರಾಮ ಪಂಚಾಯತಿಯ ಕುಟುಂಬಗಳಿಗೆ ದಿನಸಿ ಕಿಟ್‌ ಹಾಗೂ ಹಾಸಿಗೆಯನ್ನು ವಿತರಿಸಿ ಅವರು ಮಾತನಾಡಿದರು.

ಇಂತಹ ಕಷ್ಟ ಯಾರಿಗೂ ಬರದಿರಲಿ. ಸರ್ಕಾರ‌ ಎಲ್ಲರಿಗೂ ಹೆಚ್ಚಿನ ಪರಿಹಾರ ನೀಡಬೇಕು. ಮನೆ ಹಾನಿ ಆದವರಿಗೂ ಪರಿಹಾರವನ್ನು ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕಾಳಜಿ ಕೇಂದ್ರದಲ್ಲಿ ಇರುವವರಿಗೆ ಯಾವುದೇ ಕೊರತೆಯಾಗದಂತೆ ನೊಡಿಕೊಳ್ಳಬೇಕು. ಮತ್ತೆ ಮಳೆ ಜೋರಾಗಿ ಸುರಿಯುತ್ತಿದೆ. ಯಾವುದೇ ಅವಘಡ, ಪ್ರವಾಹ ಉಂಟಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಿಜೆಪಿ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.