ಜಿಲ್ಲೆ

26 ಯುವತಿಯರೊಂದಿಗೆ ಕನೆಕ್ಷನ್-ವಂಚನೆ​; ಮಾಜಿ ಲೈನ್​ಮ್ಯಾನ್​, ವಂಚಕ, ಕೊಲೆ ಆರೋಪಿಯ ಬಂಧನ

Webdesk - Ravikanth

ಬೆಂಗಳೂರು: ಲೈನ್​ಮ್ಯಾನ್​ ಆಗಿದ್ದಾಗ 26 ಯುವತಿಯರಿಗೆ ಲೈನ್ ಹೊಡೆದು ಕನೆಕ್ಷನ್ ಸಾಧಿಸಿ, ವಂಚಿಸಿದ್ದವನನ್ನು ಬೆಂಗಳೂರಿನ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಮೂಲದ ಭೀಮರಾಜ್​ ಬಂಧಿತ ಆರೋಪಿ.

ಮದುವೆ, ಹೆಸ್ಕಾಂ ಕೆಲಸದ ಆಮಿಷ ತೋರಿಸಿ 26 ಯುವತಿಯರಿಗೆ ವಂಚಿಸಿದ್ದ ಈತ ಕೊಲೆ ಆರೋಪಿ ಕೂಡ. ವಂಚನೆಗೀಡಾದ ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ ಬೆಂಗಳೂರು ಅಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಅನುಕಂಪದ ಆಧಾರದಲ್ಲಿ ಕೆಲಸ ಪಡೆದು ಕೆಲ ತಿಂಗಳು ಹೆಸ್ಕಾಮ್​ನಲ್ಲಿದ್ದ ಆರೋಪಿ, ಅಲ್ಲಿ ಲೈನ್​ಮ್ಯಾನ್​ ಆಗಿದ್ದಾಗಲೇ ಸುನೀತಾ ಎಂಬ ಯುವತಿಯನ್ನು ಕೊಲೆ ಮಾಡಿದ ಆರೋಪವನ್ನೂ ಎದುರಿಸುತ್ತಿದ್ದಾನೆ. ಈ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆ ಬಳಿಕ ಹಣಕ್ಕಾಗಿ ಅಡ್ಡದಾರಿ ಹಿಡಿದಿದ್ದ.

ಮದುವೆ ಸಂಬಂಧ ಆನ್​ಲೈನ್​ ಮೊರೆಹೊದ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ ಅದಕ್ಕೆಂದೇ ಶಾದಿ.ಕಾಮ್​ ಮುಂತಾದ ತಾಣಗಳಲ್ಲಿ ನಕಲಿ ಪ್ರೊಫೈಲ್ ಮಾಡಿಟ್ಟುಕೊಂಡಿದ್ದ. ಮದುವೆ ಆಗುವ ಆಮಿಷವೊಡ್ಡುತ್ತಿದ್ದ ಈತ, ಪರೀಕ್ಷೆ ಇಲ್ಲದೆ ಹೆಸ್ಕಾಮ್​ನಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ.

ಹೀಗೆ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಧಾರವಾಡ, ರಾಯಚೂರು, ಬಿಜಾಪುರ ಸೇರಿ ಹಲವು ಕಡೆ ಒಟ್ಟು 26 ಯುವತಿಯರಿಗೆ ಮೋಸ ಮಾಡಿರುವ ಈತ ಬರೋಬ್ಬರಿ 21.30 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಈ ಸಂಬಂಧ ಯುವತಿಯೊಬ್ಬಳು ನೀಡಿದ್ದ ದೂರಿನ ಮೇರೆಗೆ ಆರೋಪಿಯನ್ನು ವಿಜಯಪುರದಲ್ಲಿ ಬಂಧಿಸಿದ ಪೊಲೀಸರು, ಬೆಂಗಳೂರಿಗೆ ಕರೆತಂದಿದ್ದಾರೆ.