ಜಿಲ್ಲೆ

ಜೆಡಿಎಸ್​ ಜತೆಗಿನ ಮೈತ್ರಿ ಇನ್ನೂ ಸುದೀರ್ಘ ಚರ್ಚೆಯಾಗಿಲ್ಲ: ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ

Webdesk - Manjunatha B

ಬಳ್ಳಾರಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಇನ್ನೂ ಸುದೀರ್ಘ ಚರ್ಚೆಯಾಗಿಲ್ಲ. ಮುಂಬರುವ ದಿನಗಳಲ್ಲಿ ಅದು ಆಗಬಹುದು ಎಂದು ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳ ಆಡಳಿತ ನೋಡಿದ ಮೇಲೆ ಎಲ್ಲರೂ ವಿರೋಧಿಸುವ ಅವಶ್ಯಕತೆಯಿದೆ. ಸಿದ್ದರಾಮಯ್ಯನವರ ಹಿಂದಿನ ಹಾಗೂ ಈಗಿನ ಆಡಳಿತಕ್ಕೆ ಸಾಕಷ್ಟು ವ್ಯತ್ಯಾಸವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರ ಹೇಳಿಕೆ ಪ್ರಕಾರ ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂಬುದು ಅರ್ಥವಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಎಲ್ಲಾ ಹಂತಗಳಲ್ಲಿಯೂ ಸುದೀರ್ಘವಾಗಿ ಚರ್ಚೆ ಮಾಡಬೇಕಿದೆ. ಮುಂಬರುವ ದಿನಗಳಲ್ಲಿ ಇದು ಆಗಬಹುದು ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆಸಿದಂತಹ ಆಡಳಿತಕ್ಕೂ ಈಗಿನದ್ದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆಂತರಿಕವಾಗಿ ಕಾಂಗ್ರೆಸ್​ನಲ್ಲಿ ಬಹಳಷ್ಟು ನಾಯಕರಿಗೆ ಬೇಗುದಿ ಇದ್ದು, ಅದರಲ್ಲಿ ಮೊದಲನೆಯವರಾಗಿ ಹರಿಪ್ರಸಾದ್​ ಎಂದು ಹೇಳಬಹುದು. ಅವರ ಹೇಳಿಕೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಲು ನಿರಾಕರಿಸುತ್ತಿರುವುದನ್ನು ಗಮನಿಸಿದರೆ ಹರಿಪ್ರಸಾದ್​ ಕಾಂಗ್ರೆಸ್​ನಲ್ಲಿ ಪ್ರಬಲ ನಾಯಕರಾಗಿರುವುದು ಕಂಡು ಬರುತ್ತದೆ ಎಂದು ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.