ಬೆಂಗಳೂರು :ಭಾನುವಾರ ನಡೆಯಲಿರುವ ಖಗ್ರಾಸ ಚಂದ್ರಗ್ರಹಣವು ನಭೋ ಮಂಡಲದಲ್ಲಿ ನಡೆಯುವ ಖಗೋಳದ ವಿಸ್ಮಯವಾಗಿದ್ದು, ಇದನ್ನು ಎಲ್ಲರೂ ಬರಿಗಣ್ಣಿನಿಂದ ವೀಕ್ಷಿಸಬಹುದು ಎಂದು ಖಗೋಳ ವಿಜ್ಞಾನಿ ಹಾಗೂ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಬಿ.ಆರ್.ಗುರುಪ್ರಸಾದ ಹೇಳಿದ್ದಾರೆ.
ವೀಕ್ಷಕರ ವೇದಿಕೆ ಕರ್ನಾಟಕ (ವೀವೇಕ) ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಹಣ ಎಂಬುದು ಸೂರ್ಯ, ಭೂಮಿ ಮತ್ತು ಚಂದ್ರನ ನಡುವಿನ ನೆರಳು ಬೆಳಕಿನ ಆಟ. 1500 ವರ್ಷಗಳ ಹಿಂದೆಯೇ ಭಾರತದ ವಿಜ್ಞಾನಿ ಆರ್ಯಭಟ ಇದನ್ನು ಹೇಳಿದ್ದಾನೆ. ಭಾರತೀಯ ಸಂಸ್ಕೃತಿಯಲ್ಲಿ ಗ್ರಹಣದ ವೈಜ್ಞಾನಿಕ ವಿವರಗಳು ಸಾಕಷ್ಟಿವೆ. ಈ ಬಗ್ಗೆ ನಿರಂತರವಾದ ಸಂಶೋಧನೆಗಳು ನಡೆಯುತ್ತಲೇ ಇವೆ. ಅಪರೂಪಕ್ಕೆ ದೊರೆಯುವ ಇಂತಹ ಅವಕಾಶದಿಂದ ಯಾರೂ ವಂಚಿತರಾಗದೆ ಎಲ್ಲರೂ ರಕ್ತಚಂದ್ರನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು. ಚಂದ್ರಗ್ರಹಣವು ಬರಿಗಣ್ಣಿನಿಂದ ನೋಡುವುದಕ್ಕೆ ಯಾವುದೇ ಅಪಾಯವಿಲ್ಲ. ತಮ್ಮ ತಮ್ಮ ಮನೆಯ ಟೆರೇಸ್ ಮೇಲೆ ಅಥವಾ ವಿಶಾಲವಾದ ಪ್ರದೇಶಗಳಲ್ಲಿ ನಿಂತು ಗ್ರಹಣವನ್ನು ವೀಕ್ಷಿಸಬಹುದು. ದೂರದರ್ಶಕ ಅಥವಾ ದುರ್ಬೀನು ಮೂಲಕ ನೋಡಿದಾಗ ಅದರ ಸೌಂದರ್ಯ ಮತ್ತಷ್ಟು ಪರಿಣಾಮಕಾರಿಯಾಗಿ ಅನುಭವಕ್ಕೆ ಬರುತ್ತದೆ. ಅದರ ಅವಕಾಶ ಇಲ್ಲದವರು ನೇರವಾಗಿಯೂ ಗ್ರಹಣವನ್ನು ನೋಡಬಹುದು. ಈ ಬಾರಿ ಸಂಪೂರ್ಣ ಚಂದ್ರಗ್ರಹಣ ನಡೆಯುತ್ತಿದ್ದು ಅಪರೂಪಕ್ಕೆ ದೀರ್ಘ ಕಾಲದವರೆಗೆ ಪೂರ್ಣ ಗ್ರಹಣ ಇರುತ್ತದೆ. ವಾತಾವರಣದಲ್ಲಿ ಮೋಡವಿಲ್ಲದೆ ಆಗಸವು ಸ್ವಚ್ಛಂದವಾಗಿದ್ದರೆ ರಕ್ತವರ್ಣದ ಚಂದ್ರನ ನೋಡುವುದು ವಿಶೇಷ ಅನುಭವ ನೀಡಲಿದೆ ಎಂದು ತಿಳಿಸಿದರು.
ಭಾನುವಾರ ರಾತ್ರಿ 9.57ಕ್ಕೆ ಆರಂಭವಾಗುವ ಗ್ರಹಣವು 11 ಗಂಟೆಗೆ ಪೂರ್ಣ ಗೋಚರಿಸುತ್ತದೆ. ಸುಮಾರು 82 ನಿಮಿಷ ಪೂರ್ಣ ಗ್ರಹಣದ ನಂತರ ನಿಧಾನವಾಗಿ ಭೂಮಿಯ ಅಂಬ್ರಾದಿಂದ ಪೆನಂಬ್ರಾದ ಮೂಲಕ ಚಲಿಸಿ 1.26ಕ್ಕೆ ಗ್ರಹಣ ಮುಕ್ತಾಯವಾಗುತ್ತದೆ. ಗ್ರಹಣಕ್ಕೆ ಸಂಬಂಧಪಟ್ಟ ಪಾರ್ಶ್ವಛಾಯೆಯು 8.58ಕ್ಕೆ ಆರಂಭವಾಗಿ 2.25ರವರೆಗೆ ಇರುತ್ತದೆಯಾದರೂ ನೋಡುಗರಿಗೆ ತಿಳಿಯುವುದಿಲ್ಲ ಎಂದು ಗುರುಪ್ರಸಾದ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವೀವೇಕ ಸದಸ್ಯರು ಹಾಗೂ ಖಗೋಳ ವಿಜ್ಞಾನಿಗಳಾದ ನಿರುಜ್ ಮೋಹನ್ ರಾಮಾನುಜಂ, ನಂದನ ನರಸಿಂಹ, ಜ್ಯೋತಿ ಮೆಹರಾ, ಆನಂದರಾಮ ಮತ್ತಿತರರು ಉಪಸ್ಥಿತರಿದ್ದರು.