ಪ್ರತಿ ತಿಂಗಳ ಸಂಕ್ರಮಣದಂದು ಶಬರಿಮಲೆ ಯಾತ್ರೆ ಕೈಗೊಂಡು ಅಯ್ಯಪ್ಪಸ್ವಾಮಿಯ ದರ್ಶನ ಪಡೆಯುತ್ತಿರುವ ವೆಂಕಟೇಶ ಮತ್ತು ನರಸಿಂಹ ಪೂಜಾರಿ ಹೊರ್ಲಾಳಿ. 
ಜಿಲ್ಲೆ

ಪ್ರತಿ ತಿಂಗಳು ಶಬರಿಮಲೆ ಯಾತ್ರೆ!

Avinash R

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ವರ್ಷಕ್ಕೊಮ್ಮೆ ಮಾತ್ರ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಶ್ರೀಕ್ಷೇತ್ರ ಶಬರಿಮಲೆಗೆ ಹೋಗುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಇಲ್ಲಿನ ಇಬ್ಬರು ಅಯ್ಯಪ್ಪ ಭಕ್ತರು ಪ್ರತಿ ತಿಂಗಳೂ ಶಬರಿಮಲೆಗೆ ಹೋಗಿ ಹರಕೆ ತೀರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕೊಕ್ಕರ್ಣೆ ನರಸಿಂಹ ಪೂಜಾರಿ ಹೊರ್ಲಾಳಿ ಹಾಗೂ ಹೆಬ್ರಿ ಹುತ್ತುರ್ಕೆಯ ವೆಂಕಟೇಶ ಎಸ್.ಇವರು ಪ್ರತಿ ತಿಂಗಳ ಸಂಕ್ರಮಣದಂದು ಶಬರಿಮಲೆಗೆ ತೆರಳಿ ಅಯ್ಯಪ್ಪಸ್ವಾಮಿಗೆ ಪೂಜೆ ಸಲ್ಲಿಸಿ ಬರುತ್ತಿದ್ದಾರೆ.

123 ತಿಂಗಳು

10 ವರ್ಷದ ಹಿಂದೆ ತಮ್ಮ ಮನಸ್ಸಿನ ಸಂಕಲ್ಪ ಈಡೇರಿದರೆ, ಕೈಗೊಂಡ ಕಾರ್ಯ ನೆರವೇರಿದರೆ ಪ್ರತಿ ತಿಂಗಳ ಸಂಕ್ರಮಣದಂದು ಶಬರಿಮಲೆ ಯಾತ್ರೆ ಕೈಗೊಳ್ಳುತ್ತೇನೆ ಎಂದು ಹರಕೆ ಹೇಳಿಕೊಂಡಿದ್ದರಂತೆ. ಅದರಂತೆ ಅವರು ಕಳೆದ 10 ವರ್ಷದಿಂದ ಪ್ರತಿ ತಿಂಗಳು ಶಬರಿಮಲೆ ಯಾತ್ರೆ ಮುಂದುವರಿಸುತ್ತ ಬಂದಿದ್ದಾರೆ. ಒಂದು ವರ್ಷಾವಧಿಯಲ್ಲಿ 12 ಬಾರಿ ಸಂಕ್ರಮಣ ಆಗಮಿಸುತ್ತದೆ. ಈಗಾಗಲೇ ಇವರು ಶಬರಿಮಲೆ ಯಾತ್ರೆ ಕೈಗೊಂಡು 123 ತಿಂಗಳು ಕಳೆದಿರುವುದು ವಿಶೇಷವಾಗಿದೆ.

ರೈಲ್ವೆಯಲ್ಲಿ ಪ್ರಯಾಣ

ಪ್ರತಿ ತಿಂಗಳಲ್ಲಿ ಬರುವ ಸಂಕ್ರಮಣ ದಿನದಂದು ಶಬರಿಮಲೆಯಲ್ಲಿ ಶ್ರೀಕ್ಷೇತ್ರದ ಬಾಗಿಲು ತೆರೆದು ಅಯ್ಯಪ್ಪನ ದರುಶನಕ್ಕೆ ಅವಕಾಶ ನೀಡುತ್ತಾರೆ. ಹೀಗಾಗಿ ವೆಂಕಟೇಶ ಹಾಗೂ ನರಸಿಂಹ ಅವರು ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಶನ್‌ನಿಂದ ಶಬರಿಮಲೆಗೆ ಯಾತ್ರೆ ಕೈಗೊಳ್ಳುತ್ತಿದ್ದರು. ಇಲಾಖೆಯ ನಿಯಮದಂತೆ ಮೂರು ತಿಂಗಳಿಗೆ ರೈಲು ಪ್ರಯಾಣದ ಸೀಟ್ ಕಾದಿರಿಸಲು ಇರುವ ಅವಕಾಶ ಸದುಪಯೋಗ ಮಾಡಿಕೊಂಡಿದ್ದರು. ಈ ಮಧ್ಯೆ ಕರೊನಾ ಸಂದರ್ಭದಲ್ಲಿ ರೈಲ್ವೆ ಸಂಚಾರ ಸ್ಥಗಿತಗೊಂಡಿದ್ದರಿಂದ ಎರಡು ಸಲ ಇವರಿಗೆ ಯಾತ್ರೆ ಮಾಡಲು ಆಗಿರಲಿಲ್ಲ. ಇವರಿಬ್ಬರು ಮುಂಗಡವಾಗಿ ಕಾದಿಟ್ಟ ಸೀಟಿನ ಹಣವನ್ನು ರೈಲ್ವೆ ಇಲಾಖೆ ಹಿಂದಿರುಗಿಸಿತ್ತು.

ಪಡಿಪೂಜೆಗೆ ಬುಕ್ಕಿಂಗ್

ಹತ್ತು ವರ್ಷದ ಹಿಂದೆ ವೆಂಕಟೇಶ ಅವರು ಪ್ರತಿ ತಿಂಗಳ ಸಂಕ್ರಮಣದಂದು ಯಾತ್ರೆ ಕೈಗೊಳ್ಳುವ ಆರಂಭದಲ್ಲಿ ಶಬರಿಮಲೆ ಕ್ಷೇತ್ರದಲ್ಲಿ ಪಡಿಪೂಜೆ ಸಲ್ಲಿಸುವ ಹರಕೆ ಹೊತ್ತಿದ್ದರು. ಅದಕ್ಕಾಗಿ ಅವರು 40 ಸಾವಿರ ರೂ. ಪಾವತಿಸಿ ಪಡಿಪೂಜೆಯ ಬುಕ್ಕಿಂಗ್ ಮಾಡಿದ್ದರು. 2030ರ ಫೆಬ್ರವರಿ 13ರಂದು ಶಬರಿಮಲೆಯಲ್ಲಿ ಪಡಿಪೂಜೆಯ ಹರಕೆ ನೆರವೇರಲಿದೆ. ಅಲ್ಲಿಯ ತನಕ ಪ್ರತಿ ತಿಂಗಳು ಸಂಕ್ರಮಣದಂದು ಶಬರಿಮಲೆ ಯಾತ್ರೆ ಕೈಗೊಳ್ಳುತ್ತೇನೆ ಎನ್ನುವ ವಿಶ್ವಾಸವಿದೆ. ನನ್ನ 12ನೇ ವಯಸ್ಸಿನಿಂದಲೇ ಶಬರಿಮಲೆ ಯಾತ್ರೆ ಮಾಡುತ್ತಿದ್ದೇನೆ ಎನ್ನುತ್ತಾರೆ ಅಯ್ಯಪ್ಪನ ಭಕ್ತ ವೆಂಕಟೇಶ.

ಆರು ವರ್ಷದ ಹಿಂದೆ ನಾನು ಹಾಗೂ ಇನ್ನಿತರ ಐವರು ಅಯ್ಯಪ್ಪ ಮಾಲಾಧಾರಿಗಳು ಉಡುಪಿ ಜಿಲ್ಲೆಯ ಕೊಕ್ಕರ್ಣೆಯಿಂದ ಶಬರಿಮಲೆಗೆ ಪಾದಯಾತ್ರೆ ನಡೆಸಿದ್ದೆವು. ದಿನವೂ ಸರಾಸರಿ 30 ಕಿ.ಮೀ. ಕ್ರಮಿಸಿ, 19 ದಿನಗಳಲ್ಲಿ ಶಬರಿಮಲೆ ತಲುಪಿದ್ದೆವು.-ನರಸಿಂಹ ಪೂಜಾರಿ ಹೊರ್ಲಾಳಿಅಯ್ಯಪ್ಪಸ್ವಾಮಿ ಮಾಲಾಧಾರಿ