More

    ಮೆಸ್ಕಾಂಗೆ ಪವರ್‌ಮನ್ ಶಾಕ್!

    -ಗೋಪಾಲಕೃಷ್ಣ ಪಾದೂರು, ಉಡುಪಿ

    ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದೇ ತಡ ವರ್ಗಾವಣೆ ಪರ್ವ ಶುರುವಾಗಿದ್ದು, ಉಡುಪಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಕರ್ನಾಟಕ ಮೂಲದ 30ಕ್ಕೂ ಅಧಿಕ ಲೈನ್‌ಮನ್‌ಗಳು ಸ್ವಂತ ಊರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದರಿಂದ ಮೆಸ್ಕಾಂಗೆ ಸಿಬ್ಬಂದಿ ಕೊರತೆಯಾಗುತ್ತಿದೆ.

    ಜಿಲ್ಲೆಗೆ 1048 ಪವರ್‌ಮನ್ ಹುದ್ದೆ ಮಂಜೂರಾಗಿದ್ದು, 610 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 438 ಹುದ್ದೆ ಖಾಲಿ ಇದೆ. ಈ ಮಧ್ಯೆ ಪ್ರತಿವರ್ಷ 20ರಿಂದ 25 ಮಂದಿ ನಿವೃತ್ತಿಯಾಗುತ್ತಿದ್ದು, ಮೆಸ್ಕಾಂ ಅಧಿಕಾರಿಗಳು ತಲೆಬಿಸಿಯಲ್ಲಿದ್ದಾರೆ.

    ಮೊದಲೇ ಸಿಬ್ಬಂದಿ ಸಂಖ್ಯೆ ಕಡಿಮೆ ಇದ್ದು, ಈಗಿರುವ ಪವರ್‌ಮನ್‌ಗಳೂ ವರ್ಗಾವಣೆಗೊಂಡರೆ ವಿದ್ಯುತ್ ಸಮಸ್ಯೆ ಉಂಟಾದಾಗ ನಿರ್ವಹಣೆ ಅಥವಾ ರಿಪೇರಿ ಕಾರ್ಯಕ್ಕೆ ತೊಡಕಾಗುತ್ತಿದೆ. ಜನರಿಂದ ದಿನವೂ ಬರುವ ದೂರುಗಳನ್ನು ಸರಿಪಡಿಸುವುದು ಹೇಗೆ ಎಂಬ ಚಿಂತೆ ಹಿರಿಯ ಅಧಿಕಾರಿಗಳನ್ನು ಕಾಡುತ್ತಿದೆ. ಹೀಗಾಗಿ ಮಳೆಗಾಲ ಮುಗಿಯುವವರೆಗೆ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.

    ಉ.ಕ. ಮೂಲದವರು

    ಅವಿಭಜಿತ ದ.ಕ. ಜಿಲ್ಲೆಯ ಹೆಚ್ಚಿನ ಯುವಕರು ಖಾಸಗಿ ಉದ್ಯೋಗ ನೆಚ್ಚಿಕೊಳ್ಳುತ್ತಾರೆ. ಇದರಿಂದಾಗಿ ಶೇ. 10ರಷ್ಟು ಮಂದಿ ಮಾತ್ರ ಸ್ಥಳೀಯರಿದ್ದು, ಉಳಿದಂತೆ ಶೇ.90ರಷ್ಟು ಮಂದಿ ಉತ್ತರ ಕರ್ನಾಟಕ ಭಾಗದವರಾಗಿದ್ದಾರೆ. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಕಲಬುರಗಿ ಸೇರಿದಂತೆ ಹುಬ್ಬಳ್ಳಿ ಕಡೆಯವರು ಮೆಸ್ಕಾಂನ ಪವರ್‌ಮನ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

    ಇದೀಗ ಸರ್ಕಾರದಿಂದಲೇ ಹಲವು ಪವರ್‌ಮನ್‌ಗಳು ವರ್ಗಾವಣೆ ಆಗಿರುವ ಆದೇಶ ಈಗಾಗಲೇ ಅಧಿಕಾರಿಗಳ ಕೈ ಸೇರಿದೆ. ಮುಂದಿನ ದಿನಗಳಲ್ಲಿ ಅವರು ಊರಿಗೆ ತೆರಳುವುದು ನಿಶ್ಚಿತವಾಗಿದ್ದು, ಜಿಲ್ಲೆಯಲ್ಲಿ ಪವರ್‌ಮನ್‌ಗಳ ಕೊರತೆ ಕಾಡಲಿದೆ.

    ನೇಮಕಾತಿ ಷರತ್ತು ಉಲ್ಲಂಘನೆ

    ಕೆಲಸಕ್ಕೆ ಸೇರ್ಪಡೆಗೊಳ್ಳುವಾಗ ನೇಮಕಾತಿ ಆದೇಶ ಪತ್ರದ ಶರತ್ತು ಸಂಖ್ಯೆ 11ರಲ್ಲಿ ‘ನೀವು ಕೆಲಸಕ್ಕೆ ಸೇರಿದ ನಂತರ ಮವಿಸಕಂ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯನಿರ್ವಹಿಸಬೇಕಾಗಿದ್ದು, ಅಂತರ್ ಕಂಪನಿ ವರ್ಗಾವಣೆಗಳಿಗೆ ಅವಕಾಶ ಇರುವುದಿಲ್ಲ’ ಎಂಬುದಾಗಿ ಸ್ಪಷ್ಟವಾಗಿ ಬರೆಯಲಾಗಿದೆ. ಮೆಸ್ಕಾಂನಲ್ಲೇ ಉದ್ಯೋಗದಲ್ಲಿರುತ್ತೇನೆ ಎಂಬ ಬಗ್ಗೆ ಬಾಂಡ್ ಕೂಡ ನೀಡಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿ ಕೆಲಸಕ್ಕೆ ಸೇರಿ 5-6 ವರ್ಷ ದುಡಿಯುತ್ತಾರೆ. ಬಳಿಕ ತಮ್ಮೂರಿನ ಪ್ರಭಾವಿ ರಾಜಕಾರಣಿಗಳ ಸಹಕಾರದಿಂದ ಕೌಟುಂಬಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಹಾಗೂ ಇನ್ನಿತರ ಕಾರಣಗಳಿಂದ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ.

    ನಮ್ಮ ಅನೇಕ ಲೈನ್‌ಮನ್‌ಗಳು ವರ್ಗಾವಣೆಯಾಗುತ್ತಿದ್ದಾರೆ. ಕೆಲವರನ್ನು ಮನವೊಲಿಸಿ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಮೆಸ್ಕಾಂನಲ್ಲಿ ಶೇ.90ಕ್ಕಿಂತ ಅಧಿಕ ಮಂದಿ ಉತ್ತರ ಕರ್ನಾಟಕದವರೇ ಇದ್ದಾರೆ. ಉಡುಪಿಯಲ್ಲಿ ಮಳೆಗಾಲದಲ್ಲಿ ಲೈನ್‌ಮನ್‌ಗಳಿಗೆ ಸಹಾಯಕರಾಗಿ 139 ಮಂದಿಯನ್ನು ಗುತ್ತಿಗೆ ಅಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.
    -ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts