ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೊನ್ನೆಮೊನ್ನೆ ನೈಟ್ ಕರ್ಫ್ಯೂ ಜಾರಿಗೊಳಿಸುವ ಕುರಿತು ಘೋಷಿಸುತ್ತಿದ್ದಂತೆ ಹಲವರು ಚಿಂತಾಕ್ರಾಂತರಾಗಿದ್ದರು. ಮಾತ್ರವಲ್ಲ, ಸಾರ್ವಜನಿಕರಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ನೈಟ್ ಕರ್ಫ್ಯೂ ಜಾರಿಗೂ ಮುನ್ನವೇ ಮುಖ್ಯಮಂತ್ರಿ ಆ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು. ಹೀಗೆ ನೈಟ್ ಕರ್ಫ್ಯೂ ಜಾರಿ ನಿರ್ಧಾರದಿಂದ ಹಿಂದೆ ಸರಿದಿದ್ದಕ್ಕೆ ಬಹುತೇಕ ಎಲ್ಲರೂ ನಿರಾಳಗೊಂಡಿದ್ದರು. ಆದರೆ ನೈಟ್ ಕರ್ಫ್ಯೂ ಇಲ್ಲವೆಂದು ಮುಖ್ಯಮಂತ್ರಿಯೇ ಭರವಸೆ ನೀಡಿದ್ದರೂ ಇವರಿಗಿನ್ನೂ ಅದೇ ಚಿಂತೆಯಂತೆ.
ನೈಟ್ ಕರ್ಫ್ಯೂ ಜಾರಿಯಾದರೆ ದೊಡ್ಡ ಹೊಡೆತ ಬೀಳುತ್ತಿದ್ದುದು ವ್ಯಾಪಾರ-ವಹಿವಾಟಿಗೆ. ಅದರಲ್ಲೂ ಹೋಟೆಲ್, ಬಾರ್-ರೆಸ್ಟೋರೆಂಟ್ ಮತ್ತು ಪಬ್ಗಳಿಗೆ. ನೈಟ್ ಕರ್ಫ್ಯೂ ಜಾರಿ ನಿರ್ಧಾರದಿಂದ ಸರ್ಕಾರ ವಿಮುಖವಾಗಿದ್ದರೂ ಬಾರ್-ಪಬ್ ಮಾಲೀಕರು ಮಾತ್ರ ಇನ್ನೂ ಅದೇ ಚಿಂತೆಯಲ್ಲಿದ್ದಾರಂತೆ.
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪಾರ್ಟಿಯ ಕಾರಣಕ್ಕೆ ಹೆಚ್ಚಿನ ವಹಿವಾಟು ನಡೆಯುತ್ತದೆ. ಆದರೆ ನೈಟ್ ಕರ್ಫ್ಯೂ ರದ್ದಾಗಿದ್ದರೂ ಹೊಸ ವರ್ಷಾಚರಣೆ ಕುರಿತು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿರುವುದೇ ಇವರನ್ನು ಚಿಂತೆಗೀಡಾಗುವಂತೆ ಮಾಡಿದೆ. ಅದಕ್ಕೆ ಅತಿಮುಖ್ಯ ಕಾರಣವಾಗಿರುವುದು ಡಿಜೆ ರದ್ದು. ಡಿಜೆ ಸಿಸ್ಟಮ್ಗೆ ನಿರ್ಬಂಧ ಹೇರಿರುವುದರಿಂದ ಜನರು ಒಳಗಡೆ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ. ಡಿ. 24ರ ರಾತ್ರಿ ಡಿಜೆ ಇಲ್ಲ ಎಂಬ ಕಾರಣಕ್ಕೆ ಬುಕಿಂಗ್ ಕ್ಯಾನ್ಸೆಲ್ ಆಗಿದ್ದನ್ನು ಅನುಭವಿಸಿದ್ದೇವೆ ಎಂಬುದಾಗಿ ಹೇಳಿರುವ ಕೆಲವು ಬಾರ್-ಪಬ್ ಮಾಲೀಕರು, ವರ್ಷಾಂತ್ಯದ ರಾತ್ರಿಯಲ್ಲೂ ಮತ್ತದೇ ಸಮಸ್ಯೆ ಕಾಡಲಿದೆ ಎಂಬ ಚಿಂತೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)