ಕಾರವಾರ: ಅಂಜುದೀವ್ ದ್ವೀಪ ಭಾರತದ ವಶವಾದ ನೆನಪಿಗಾಗಿ ಯುದ್ಧ ಸ್ಮಾರಕವೊಂದನ್ನು ಕದಂಬ ನೌಕಾನೆಲೆಯಲ್ಲಿ ರಚಿಸಲಾಗಿದ್ದು, ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣ ಅವರು ಬುಧವಾರ ಅದನ್ನು ಲೋಕಾರ್ಪಣೆ ಮಾಡಿದರು.
ಅಂಜುದೀವ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ರಿಯರ್ ಅಡ್ಮಿರಲ್ ದಿ.ಅರುಣ್ ಅಡಿಟೋ ಅವರ ಪತ್ನಿ ರಂಜನಾ ಅಡಿಟೊ ಹಾಗೂ ನಿವೃತ್ತ ಸಬ್‌ಲೆಫ್ಟಿನೆಂಟ್ ಕಂಸರಾಜ್ ಶರ್ಮಾ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ದ್ವೀಪ ಸ್ವಾಧೀನಕ್ಕೆ ತಮ್ಮ ಪತಿ ಪ್ರಾಣ ತ್ಯಾಗದ ಮಾಡಿದ ನೆನಪುಗಳನ್ನು ಹಂಚಿಕೊಂಡರು.
ಕಾರವಾರದ ಬಿಣಗಾದಿಂದ ಕೇವಲ 3 ಕಿಮೀ ದೂರದಲ್ಲಿರುವ ಸಣ್ಣ ದ್ವೀಪ ಅಂಜುದೀವ್. ಈದು ತನ್ನ ಒಡಲಲ್ಲಿ ಹಲವು ಅಪರೂಪದ ಇತಿಹಾಸವನ್ನು ಇಟ್ಟುಕೊಂಡಿದೆ. ವಾಸ್ಕೋಡಿಗಾಮ ಈ ದ್ವೀಪಕ್ಕೆ ಬಂದಿದ್ದ ಎಂಬ ದಾಖಲೆಗಳಿವೆ. ಇನ್ನು ಭಾರತೀಯ ರಾಜರು, ಬ್ರಿಟಿಷರು, ಪೋರ್ಚುಗೀಸರು ಮುಂತಾದ ಹಲವರು ಅರಸರ ನಡುವಿನ ಹೋರಾಟಕ್ಕೆ ಈ ದ್ವೀಪ ಸಾಕ್ಷಿಯಾಗಿತ್ತು.
ಭಾರತ ದೇಶವು 1947 ರಲ್ಲಿ ಬ್ರಿಟಿಷರ ದಾಸ್ಯದಿಂದ ಸ್ವಾತಂತ್ರ್ಯವಾದರೂ ಇದೇ ದೇಶದ ಒಂದು ಭಾಗ ಗೋವಾ 1961 ರವರೆಗೂ ಪೋರ್ಚುಗೀಸರ ಆಡಳಿತದಲ್ಲೇ ಇತ್ತು. ಮತ್ತು ವಿಚಿತ್ರ ಎಂದರೆ ಕಾರವಾರ ಬಿಣಗಾದಿಂದ ಕೂಗಳತೆ ದೂರದಲ್ಲಿರುವ ಅಂಜುದೀವ್ ದ್ವೀಪವು ಗೋವಾ ಪೋರ್ಚುಗೀಸರ ಕೈವಶದಲ್ಲಿತ್ತು.
ಭಾರತವು 1961 ರ ಡಿಸೆಂಬರ್ 17 ರಂದು ಡಮನ್ ಹಾಗೂ ಡೀವ್ ದ್ವೀಪಗಳನ್ನು ಪೋರ್ಚುಗೀಸರ ಕೈಯ್ಯಿಂದ ವಶಕ್ಕೆ ಪಡೆಯಿತು. ನಂತರ ಅಂಜುದೀವ್ ದ್ವೀಪವನ್ನು ತನ್ನ ಕೈವಶ ಮಾಡುವ ಕಾರ್ಯಾಚರಣೆಯನ್ನು ಭಾರತೀಯ ನೌಕಾಪಡೆ ಪ್ರಾರಂಭಿಸಿತ್ತು. ಭಾರತೀಯ ನೌಕಾಸೇನೆಯ ಐಎನ್‌ಎಸ್ ತ್ರಿಶೂಲ್ ಹಾಗೂ ಮೈಸೂರು ಯುದ್ಧ ನೌಕೆಗಳು ದ್ವೀಪದ ಮೇಲೆ ದಾಳಿ ನಡೆಸಿದವು. ಸುಮಾರು 14 ತಾಸು ನಿರಂತರ ದಾಳಿಯ ನಂತರ ಅಂಜುದೀವ್ ದ್ವೀಪವು ಭಾರತದ ಕೈವಶವಾಯಿತು. ಈ ಹೋರಾಟದಲ್ಲಿ 7 ಸೈನಿಕರು ಪ್ರಾಣಾರ್ಪಣೆ ಮಾಡಿದ್ದರು. 19 ಸೈನಿಕರು ಗಾಯಗೊಂಡಿದ್ದರು. ಈ ಹೋರಾಟವನ್ನು ಪರಿಗಣಿಸಿ 7 ಗ್ಯಾಲೆಂಟ್ರಿ ಅವಾರ್ಡ್ ಹಾಗೂ 4 ಮೆನ್ಶನ್ಡ ಇನ್ ಡಿಸ್‌ಪ್ಯಾಚ್ ನೀಡಲಾಗಿತ್ತು. ಸದ್ಯ ಅಂಜುದೀವ್ ದ್ವೀಪವು ಭಾರತೀಯ ನೌಕಾಸೇನೆಯ ಕೈವಶದಲ್ಲಿಯೇ ಇದೆ. ದ್ವೀಪದಲ್ಲಿರುವ ಸ್ಮಾರಕಗಳನ್ನು ನೌಕಾಸೇನೆ ರಕ್ಷಿಸುತ್ತಿದೆ. ಈಗ ಅದರ ನೆನಪಿಗಾಗಿ ಸ್ಮಾರಕವೂ ನಿರ್ಮಾಣವಾಗಿದೆ.